ಮಂಗಳೂರು : ಶಕ್ತಿನಗರದ ಶಕ್ತಿ ವಿದ್ಯಾಸಂಸ್ಥೆಯಲ್ಲಿ ಕನ್ನಡ ನಾಡು ನುಡಿಯ ರಕ್ಷಣೆಗೆ ಪಣತೊಡುವ ಕರ್ನಾಟಕದ ಏಕೀಕರಣದ ಶುಭ ದಿನದಂದು ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಆದರ್ಶ ಗೋಖಲೆಯವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ನಮ್ಮ ಮಣ್ನು ನಮ್ಮ ನಾಡು ಪ್ರಪಂಚಕ್ಕೆ ಪ್ರೇರಣೆಯನ್ನು ನೀಡಿದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕಿಡಿ ಹೊತ್ತಿಸಿದ್ದು ಕನ್ನಡ ನಾಡಿನ ಮಂಗಳೂರಿನ ಮಹಿಳೆ ಅಬ್ಬಕ್ಕ. ಗದಗದ ನಾರಣಪ್ಪ ಮಡಿ ವಸ್ತ್ರವನ್ನುಟ್ಟು ಬರೆದ ಕನ್ನಡದ ಶ್ರೇಷ್ಠ ಗ್ರಂಥ ಕುಮಾರವ್ಯಾಸ ಭಾರತ ಭಾರತದ ಅತ್ಯಂತ ಶ್ರೇಷ್ಠ ಗ್ರಂಥ. ತಮ್ಮ ಅನುಭವ ಮಂಟಪದ ಮೂಲಕ ಪ್ರಪಂಚಕ್ಕೆ ಮೊಟ್ಟ ಮೊದಲಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ನೀಡಿದ ಬಸವಣ್ಣನವರು ಕನ್ನಡ ನೆಲದವರು ಎಂಬುದು ನಮ್ಮ ಹೆಮ್ಮೆ. ಕನ್ನಡದ ಮಣ್ಣಿನ ವಿಜಯನಗರ ಸಾಮ್ರಾಜ್ಯದ ವೈಭವವನ್ನು ನೋಡಲು ವಿದೇಶಿಗರು ತಂಡೋಪತಂಡವಾಗಿ ಬರುತ್ತಿದ್ದರು. ಶಕ್ತಿ ವಿದ್ಯಾಸಂಸ್ಥೆಯ ಮಕ್ಕಳ ಕನ್ನಡದ ಸ್ಪಷ್ಟತೆಯನ್ನು ಗಮನಿಸಿದರೆ ಆಲೂರು ವೆಂಕಟರಾಯರಿಗೆ ಅತ್ಯಂತ ಸಂತೋಷವಾಗಿದೆ. ವೆಂಕಟರಾಯರು ಕಂಡ ಕನಸು ನನಸಾಗಿದೆ. ಕನ್ನಡ ನಾಡು ಪ್ರಪಂಚಕ್ಕೆ ಕ್ಷಾತ್ರದಿಂದ ಬ್ರಾಹ್ಮದವರೆಗೆ, ಭೂಗೋಲದಿಂದ ಖಗೋಲದವರೆಗೆ ಎಲ್ಲ ವಿಷಯದಲ್ಲೂ ಮಾದರಿಯಾಗಿದೆ ಎಂದು ಹೇಳೀದರು. ಒಂದು ಪುಸ್ತಕ ಒಬ್ಬ ಸಾಮಾನ್ಯ ಬಾಲಕನನ್ನು ಸುಭಾಶ್ ಚಂದ್ರ ಬೋಸ್ ಆಗಿ ಬದಲಾಯಿಸಿತು. ಆದ್ದರಿಂದ ಪಾಲಕರು ತಮ್ಮ ಮಕ್ಕಳ ಹುಟ್ಟಿದ ಹಬ್ಬಕ್ಕೆ ಒಂದು ಕನ್ನಡದ ಪುಸ್ತಕವನ್ನು ಉಡುಗೊರೆಯಾಗಿ ನೀಡಿ ಆ ಪುಸ್ತಕವನ್ನು ಓದಿ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರಣೆ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ. ಸಿ. ನಾೖಕ್ ಕನ್ನಡ ನಮ್ಮ ಹೃದಯದ ಭಾಷೆ ಅದನ್ನು ನಮ್ಮ ಮಕ್ಕಳಿಗೆ ತಪ್ಪದೆ ಕಲಿಸಬೇಕು ಎಂದರು.
ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ರಚಿಸಲ್ಪಟ್ಟ ಕನ್ನಡ ನಾಡು ನುಡಿಯ ಬಗೆಗಿನ ವಸ್ತು ಪ್ರದರ್ಶನ ನುಡಿ ಶಕ್ತಿ ಸಂಭ್ರಮ ವನ್ನು ಉದ್ಘಾಟಿಸಲಾಯಿತು. ವಸ್ತು ಪ್ರದರ್ಶನದಲ್ಲಿ ಅನೇಕ ಮಕ್ಕಳು ಕನ್ನಡ ನಾಡಿನ ವೀರರಾದ, ರಾಣಿ ಅಬ್ಬಕ್ಕ, ಕೃಷ್ಣದೇವರಾಯ, ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಒನಕೆ ಓಬವ್ವ, ಮುಂತಾದವರ ವೇಷವನ್ನು ಧರಿಸಿದ್ದು ವಿಶೇಷವಾಗಿತ್ತು. ಒಂದು ಮಗು ಒಂದು ಪುಸ್ತಕ ಎಂಬ ಶೀರ್ಷಿಕೆಯ ಅಡಿಯಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಒಂದೊಂದು ಕನ್ನಡ ಪುಸ್ತಕವನ್ನು ಕೊಡಿಸಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಶಕ್ತಿ ವಿದ್ಯಾಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ., ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಮೂರ್ತಿ ಎಚ್. , ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲ ರವಿಶಂಕರ ಹೆಗಡೆ, ಶಕ್ತಿ ಪದವಿ ಪ್ರಾಥಮಿಕ ಶಾಲೆಯ ಸಂಯೋಜಕಿ ಪೆಟ್ರಿಶಿಯ ಪಿಂಟೋ ಉಪಸ್ಥಿತರಿದ್ದರು. ಕನ್ನಡ ಶಿಕ್ಷಕಿ ಪವಿತ್ರಾ ಸ್ವಾಗತಿಸಿದರು. ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ನಿಶ್ಚಿತಾ ವಂದಿಸಿದರು. ಶಕ್ತಿ ವಸತಿ ಶಾಲೆಯ ವಿದ್ಯಾರ್ಥಿನಿ ಅನನ್ಯಾ ನಿರೂಪಿಸಿದರು. ಕಾರ್ಯಕ್ರಮದಲ್ಲಿ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ನಾನಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.