ಮಂಗಳೂರು: ಶಕ್ತಿನಗರದ ಶಕ್ತಿ ಪಿ.ಯು. ಕಾಲೇಜಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು (ರಿ), ದ.ಕ. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಶಕ್ತಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಸಂಯುಕ್ತ ಆಶ್ರಯದಲ್ಲಿ ವಚನಗಳ ಕುರಿತಂತೆ ಚಿಂತನಗೋಷ್ಠಿಗಳು ನಡೆದವು.
’ವರ್ತಮಾನಕ್ಕೂ ವಚನ’ ಚಿಂತನಗೋಷ್ಠಿಗಳನ್ನು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಚನ ಸಾಹಿತ್ಯ ಒಂದು ಪ್ರಮುಖ ಪ್ರಕಾರ. 12 ನೇ ಶತಮಾನದಿಂದಲೂ ಮಾನವನ ಸಂಸ್ಕಾರ, ಸಂಸ್ಕೃತಿಯನ್ನು ರೂಪಿಸುವುದರಲ್ಲಿ, ಮೌಲ್ಯಗಳನ್ನು ಬೆಳೆಸುವಲ್ಲಿ ವಚನ ಸಾಹಿತ್ಯ ಪ್ರಮುಖ ಪಾತ್ರ ನಿರ್ವಹಿಸುತ್ತಾ ಬಂದಿರುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು. ದ.ಕ. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ಜಗನ್ನಾಥಪ್ಪ ಪನಸಾಳೆ ಜನವಾಡಾ ಪ್ರಮುಖ ವಚನಗಳನ್ನು ವಿಶ್ಲೇಷಿಸುತ್ತಾ ಜನಜೀವನದಲ್ಲಿ ಅವುಗಳ ಮಹತ್ವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಕ್ತಿ ಪಿ.ಯು. ಕಾಲೇಜಿನ ಪ್ರಾಚಾರ್ಯ ಶ್ರೀ ಪ್ರಭಾಕರ ಜಿ.ಎಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ್ ಶ್ರೀ ಕೆ.ಸಿ ನಾೖಕ್ ಉದ್ಘಾಟನಾ ಸಮಾರಂಭದ ಅಧ್ಯಕ್ಷ ಸ್ಥಾನ ವಹಿಸಿದ್ದರು. ನಸೀಮ್ ಬಾನು ಸ್ವಾಗತ ಬಯಸಿ, ಅಕ್ಷತಾ ಎಂ.ಜಿ ಕಾರ್ಯಕ್ರಮ ನಿರ್ವಹಿಸಿದರು.
ಚಿಂತನಗೋಷ್ಠಿ ’ವಚನಗಳು ಸಾರುವ ಸಾರ್ವಕಾಲಿಕ ಮೌಲ್ಯಗಳು’ ವಿಷಯದ ಬಗ್ಗೆ ಶ್ರೀಮತಿ ಸಾವಿತ್ರಿ ರಮೇಶ್ ಭಟ್ ವಿಚಾರ ಮಂಡಿಸಿದರು. ವಚನಕಾರರು ಸಾಹಿತ್ಯಲೋಕಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದರು. ಬೆಸೆಂಟ್ ಪಿ.ಯು ಕಾಲೇಜಿನ ಪ್ರಾಚಾರ್ಯ ಡಾ. ನಾಯಕ್ ರೂಪ್‌ಸಿಂಗ್ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಹರಿಣಿ ವಿಜೇಂದ್ರ ಸ್ವಾಗತಿಸಿ, ಶೀಲಾ ವಿ.ಶೆಟ್ಟಿ ವಂದಿಸಿದರು. ರೇಖಾ ಗೋಪಾಲ್ ನಿರೂಪಿಸಿದರು.
’ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದ ವಚನಗಳು’ ಗೋಷ್ಠಿಯಲ್ಲಿ ವಿಚಾರ ಮಂಡನೆ ಮಾಡಿದವರು ಪ್ರಾಧ್ಯಾಪಕ ಹಾಗೂ ಪ್ರಸಿದ್ಧ ಕೀರ್ತನಕಾರರಾಗಿರುವ ಡಾ. ಗುರುದಾಸ್ ಎಸ್.ಪಿ. ಶತಮಾನಗಳ ಹಿಂದೆಯೇ ಸಮಾಜದ ಅನಿಷ್ಠಗಳನ್ನು, ಮೂಢ ನಂಬಿಕೆಗಳನ್ನು, ಜಾತಿ ಪದ್ಧತಿ, ಡಂಭಾಚಾರಗಳನ್ನು ಕಟು ವಚನಗಳ ಮೂಲಕ ತಿದ್ದುವ ಕೆಲಸವನ್ನು ವಚನಕಾರರು ಶ್ರದ್ಧೆಯಿಂದ ಮಾಡಿದ್ದಾರೆ. ಜೀವನದಲ್ಲಿ ಸುಧಾರಣೆಗಳನ್ನು ಮೊದಲು ತಾವು ಅಳವಡಿಸಿಕೊಂಡು ಮತ್ತೆ ಇತರರಿಗೆ ಹೇಳುವ ಕೆಲಸ ನಿರಂತರವಾಗಿ ಮಾಡಿಕೊಂಡು ಬಂದರು ಎಂದರು. ಗೋಷ್ಠಿಯ ಅಧ್ಯಕ್ಷತೆಯನ್ನು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಸುಜಯ ಶೆಟ್ಟಿ ವಹಿಸಿದ್ದರು. ನಿರ್ಮಲಾ ಚಂದ್ರಶೇಖರ್ ಸ್ವಾಗತಿಸಿ, ಎಸ್. ಎ. ಬಿರಾದರ ವಂದಿಸಿದರು. ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭದಲ್ಲಿ ಶಕ್ತಿ ವಸತಿ ಶಾಲೆಯ ಪ್ರಾಚಾರ್ಯೆ ವಿದ್ಯಾ ಕಾಮತ್ ಜಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಚನ ಸಾಹಿತ್ಯ ಮಾನವ ಜನಾಂಗಕ್ಕೆ ಸದಾ ದಾರಿದೀಪವಾಗಬಲ್ಲದು ಎಂದು ಹೇಳಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಬೈಕಾಡಿ ಜನಾರ್ದನ ಆಚಾರ್ ಸಮಾರೋಪ ಭಾಷಣ ಮಾಡಿದರು. ವಿಶ್ವವಿದ್ಯಾಲಯ ಕಾಲೇಜಿನ ಹಿಂದಿ ವಿಭಾಗದ ನಿವೃತ್ತ ಮುಖ್ಯಸ್ಥ ಡಾ. ಮುರಳೀಧರ್ ನಾೖಕ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ವಚನಕಾರರು, ಕೀರ್ತನಕಾರರು, ಸಂತರು, ಭಾರತೀಯ ಸಂಸ್ಕೃತಿ ನಾಶವಾಗದಂತೆ ಕಾಪಾಡಿಕೊಂಡು ಬಂದರು ಎಂದು ಹೇಳಿದರು. ವಿನೋದ್ ಎಫ್.ಡಿ’ಸೋಜ ಸ್ವಾಗತಿಸಿ, ಕೆ.ಜಿ ಪಾಟೀಲ ಧನ್ಯವಾದ ಸಮರ್ಪಿಸಿದರು. ಶಶಿಕಲಾ ಎಂ.ಎನ್. ಕಾರ್ಯಕ್ರಮ ನಿರೂಪಿಸಿದರು. ರತ್ನಾವತಿ ಜೆ. ಬೈಕಾಡಿ ನೇತೃತ್ವದ ಉರ್ವದ ಇಂಚರ ತಂಡದವರು ವಚನಗಾಯನ ಪ್ರಸ್ತುತ ಪಡಿಸಿದರು.