ಶಕ್ತಿ ವಸತಿ ಶಾಲೆ, ಶಕ್ತಿನಗರ ಇಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರ ’ಶಕ್ತಿ ಕ್ಯಾನ್ಕ್ರಿಯೇಟ್- 2019 ಇದರಲ್ಲಿ ನಾಡಿನ ಹೆಸರಾಂತ ಕಲಾವಿದ ಹಾಗೂ ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ಭಾಗವಹಿಸಿ ವಿದ್ಯಾರ್ಥಿಗಳಿಗೆ ಅಕ್ಷರ ಸುಧಾರಣೆ, ರೇಖಾಚಿತ್ರ ಹಾಗೂ ಪರಿಸರದ ಪ್ರಾಣಿ, ಪಕ್ಷಿಗಳು, ಮರಗಿಡಗಳ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಮಾತುಗಳನ್ನಾಡಿದರು.
ಮಾನವನ ಬದುಕು ಪೂರ್ಣವಾಗಿ ಪ್ರಕೃತಿಯ ಮೇಲೆ ಅವಲಂಬಿತವಾಗಿದೆ. ಕಾಡು ಪ್ರಾಣಿಗಳೂ ಮಾನವ ವಿರೋಧಿಗಳಲ್ಲ. ಈ ಜಗತ್ತಿನಲ್ಲಿ ಮಾನವನಿಗೆ ಬದುಕುವ ಹಕ್ಕು ಎಷ್ಟಿದೆಯೋ ಅಷ್ಟೇ ಹಕ್ಕು ಪ್ರಾಣಿ, ಪಕ್ಷಿ, ಕೀಟಗಳಿಗೂ ಇದೆ.
ಪ್ರಕೃತಿಯಲ್ಲಿರುವ ಮರ, ಗಿಡಗಳನ್ನು ನಾಶ ಪಡಿಸಿದರೆ ಅದು ಮಾನವನ ಸುಖ ಜೀವನಕ್ಕೆ ಕೊಡಲಿ ಏಟು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. ತಾನೊಬ್ಬನೇ ಈ ಜಗತ್ತಿಗೆ ಒಡೆಯ ಎಂಬ ಮನುಷ್ಯನ ಸ್ವಾರ್ಥ ಭಾವನೆ ಅವನ ವಿನಾಶಕ್ಕೆ ಕಾರಣ ಎಂದು ಮಕ್ಕಳಿಗೆ ದಿನೇಶ್ ಹೊಳ್ಳ ಎಳೆ-ಎಳೆಯಾಗಿ ವಿವರಿಸಿದರು.
ಎಪ್ರಿಲ್ 11 ರಿಂದ ಪ್ರಾರಂಭವಾದ ಈ ಶಿಬಿರದಲ್ಲಿ ಎರಡು ದಿನಗಳ ಕಾಲ ಪಾಲ್ಗೊಂಡ ಶ್ರೀ ಹೊಳ್ಳ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವುದರಲ್ಲಿ ಯಶಸ್ವಿಯಾದರು. ಶಾಲಾ ಪ್ರಾಚಾರ್ಯ ಶ್ರೀಮತಿ ವಿದ್ಯಾ ಕಾಮತ್ ಜಿ. ಸ್ವಾಗತಿಸಿ, ಶಿಕ್ಷಕಿ ಪೂರ್ಣಿಮ ರೈ ವಂದಿಸಿದರು. ಕಲಾ ಶಿಕ್ಷಕಿ ಪೂರ್ಣೇಶ್ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು.