ವಿದ್ಯಾರ್ಥಿಗಳು ಶೈಕ್ಷಣಿಕ ಬದುಕಿನಲ್ಲಿ ಓದಿನಲ್ಲಿ ಗಮನಹರಿಸಿ ಏಕಾಗ್ರತೆಯನ್ನು ಗಳಿಸಬೇಕಾದರೆ, ಧ್ಯಾನ ಯೋಗದ ಪಾತ್ರ ಮಹತ್ವವಾದುದು. ಯೋಗ, ಧ್ಯಾನಗಳು ಕೇವಲ ಒಂದು ದಿನಕ್ಕೆ ಮಾತ್ರವಷ್ಟೇ ಸೀಮಿತವಾಗಿರದೆ, ವಿದ್ಯಾರ್ಥಿಗಳು ದಿನ ನಿತ್ಯವೂ ಯೋಗಾಭ್ಯಾಸದಲ್ಲಿ ತೊಡಗಬೇಕು. ಈ ಮೂಲಕ ತಮ್ಮ ಬುದ್ಧಿ ಮಟ್ಟ ಹಾಗೂ ಗೃಹಣ ಶಕ್ತಿಯನ್ನು ಹೆಚ್ಚಿಸಬೇಕು ಎಂದು ಯೋಗ ಶಿಕ್ಷಕ ಶ್ರೀನಿವಾಸ ಬಿ.ಎಂ. 5 ನೇ ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಶಕ್ತಿ ನಗರದ ಶಕ್ತಿ ವಸತಿ ಶಾಲೆಯಲ್ಲಿ ನಡೆದ ಯೋಗ ದಿನಾಚರಣೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಭಾರತೀಯ ಸನಾತನ ಸಂಸ್ಕೃತಿ ಋಷಿ ಮುನಿಗಳಿಂದ ಪರಿಚಯಿಸಲ್ಪಟ್ಟು ವಿಶ್ವಮಾನ್ಯವಾದ ಯೋಗ, ಧ್ಯಾನಗಳನ್ನು ವಿಶ್ವವೆಲ್ಲ ಅನುಸರಿಸುತ್ತಿದೆ. ಆದರೆ ಪಾಶ್ಚಾತ್ಯ ಸಂಸ್ಕೃತಿಯ ವ್ಯಾಮೋಹಕ್ಕೆ ಒಳಗಾದ ಭಾರತೀಯರು ತಮ್ಮ ಮೂಲ ಸಂಸ್ಕೃತಿಯನ್ನು ಮರೆಯುತ್ತಿರುವುದು ಬೇಸರದ ಸಂಗತಿ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾ ಪ್ರಾಂಶುಪಾಲರಾದ ವಿದ್ಯಾ ಕಾಮತ್ ಜಿ ಹೇಳಿದರು.
ಶಾಲೆಯ ವಿದ್ಯಾರ್ಥಿಗಳು ಕ್ರಿಯಾಶೀಲರಾಗಿ ಭಾಗವಹಿಸಿದರು. ಈ ಸಂದರ್ಭ ಸಂಸ್ಥೆಯ ಆಡಳಿತ ಅಧಿಕಾರಿ ಬೈಕಾಡಿ ಜನಾರ್ದನ ಆಚಾರ್, ಅಭಿವೃದ್ಧಿ ಅಧಿಕಾರಿ ನಸೀಮ್ ಬಾನು, ಮುಖ್ಯ ಸಲಹೆಗಾರ ರಮೇಶ್ ಕೆ. ಉಪಸ್ಥಿತರಿದ್ದರು. ಪ್ರಿಯಾಂಕ ರೈ ಯೋಗ ದಿನಾಚರಣೆಯ ಮಹತ್ವವನ್ನು ಹೇಳಿದರು. ಕಲಾ ಶಿಕ್ಷಕ ಪೂರ್ಣೇಶ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕರು, ಸಿಬ್ಬಂದಿಗಳು ಸಹಕರಿಸಿದರು.