ಮಂಗಳೂರಿನ ಶಕ್ತಿನಗರದ ಶಕ್ತಿ ವಸತಿ ಶಾಲೆ, ಶಕ್ತಿ ಪಿ.ಯು ಕಾಲೇಜು ಹಾಗೂ ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕ-ಶಿಕ್ಷಕೇತರರು, ಪೋಷಕರು ಹಾಗೂ ಸಾರ್ವಜನಿಕರು ಒಟ್ಟು ಸೇರಿ ಅಕ್ಟೋಬರ್ ೨ರಿಂದ ಸ್ವಚ್ಛ ಅಭಿಯಾನವನ್ನು ಹಮ್ಮಿಕೊಂಡಿದ್ದು ದಿನಾಂಕ ನವೆಂಬರ್ 2 ರಂದು ಸ್ವಚ್ಛ ಆಂದೋಲನದ ಜಾಗೃತಿ ಜಾಥಾವನ್ನು ಏರ್ಪಡಿಸಿದ್ದರು.
ಜಾಥಾದ ಉದ್ಘಾಟನೆಯನ್ನು ಮಂಗಳೂರಿನ ಶ್ರೀ ರಾಮಕೃಷ್ಣ ಮಠದ ಸ್ವಚ್ಛ ಅಭಿಯಾನದ ಸಂಚಾಲಕ ಶ್ರೀ ರಂಜನ್ ಬೆಲ್ಲರ್ಪಾಡಿ ಅವರು ನೆರವೇರಿಸಿ ಭಾರತ ಮಾತೆ ನಮ್ಮೆಲ್ಲರ ತಾಯಿ. ಸ್ವಚ್ಛ ಪರಿಸರವನ್ನು ಕಾಪಾಡಿಕೊಂಡು ನಿರ್ಮಲ ಮನಸ್ಸಿನಿಂದ ನಾವು ತಾಯಿಯನ್ನು ಆರಾಧಿಸಬೇಕು, ಗೌರವಿಸಬೇಕು. ಸ್ವಚ್ಛ ಆಂದೋಲನಕ್ಕೆ ಸಮಾರೋಪ ಎಂಬುದಿಲ್ಲ. ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ, ಅದು ನಮ್ಮ ಮನೆಯಿಂದ ಆರಂಭವಾಗಿ, ನೆರೆಕೆರೆ, ಸಮಾಜ, ಊರು, ತಾಲೂಕು, ಜಿಲ್ಲೆ, ರಾಜ್ಯ ಹಾಗೂ ದೇಶದೆಲ್ಲೆಡೆ ಹಬಿ ಕೊಳ್ಳಬೇಕು. ಇಂದಿನಿಂದಲೇ ಸ್ವಚ್ಛತಾ ಯಜ್ಞದಲ್ಲಿ ನಾವೆಲ್ಲರೂ ಪಾಲ್ಗೊಳ್ಳೋಣ ಎಂದು ಅವರು ಕರೆಯಿತ್ತರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷ ಶ್ರೀ ದಯಾನಂದ ಕತ್ತಲ್‌ಸರ್ ಅವರು ಎಲ್ಲಿ ಸ್ವಚ್ಛತೆ ಇರುತ್ತದೋ ಅಲ್ಲಿ ಭಗವಂತ ವಾಸವಾಗಿರುತ್ತಾನೆ, ಅಲ್ಲಿ ಮನಸ್ಸು ನೆಮ್ಮದಿಯಿಂದ ಇರಲು ಸಾಧ್ಯ. ಈ ಭೂಮಿ ಮತ್ತು ಪರಿಸರ ನಮಗೆ ದೇವರ ದೊಡ್ಡ ಕೊಡುಗೆ. ಪರಿಸರ ರಕ್ಷಣೆ ಹಾಗೂ ಸ್ವಚ್ಛತೆಗೆ ನಾವು ಬದ್ಧರಾಗಿ ಬದುಕಿದಾಗ ಜೀವನ ಸಾರ್ಥಕ ಎಂದು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಅತಿಥಿಗಳನ್ನು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಕೆ.ಸಿ ನಾೖಕ್ ಹಾಗೂ ಅವರ ಪತ್ನಿ ಸಗುಣ ನಾೖಕ್ ಹೂ, ಹಣ್ಣು ಹಂಪಲು ನೀಡಿ ಸ್ವಾಗತಿಸಿದರು. ಶಕ್ತಿ ಪಿ.ಯು ಕಾಲೇಜಿನ ಆವರಣದಿಂದ ಹೊರಟ ಜಾಥಾದಲ್ಲಿ ಶಾಲಾ – ಕಾಲೇಜಿನ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ, ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಶಕ್ತಿನಗರದ ಪರಿಸರದಲ್ಲಿ ಸ್ವಚ್ಛತಾ ಜಾಗೃತಿಯ ಕಹಳೆಯನ್ನೂದಿದರು. ವಿದ್ಯಾರ್ಥಿಗಳನ್ನು ಹನ್ನೊಂದು ತಂಡಗಳನ್ನಾಗಿ ಬೇರ್ಪಡಿಸಿ ಶಕ್ತಿನಗರದ ಹನ್ನೊಂದು ಆಯ್ದ ಪ್ರದೇಶಗಳನ್ನು ಸ್ವಚ್ಛಗೊಳಿಸಲಾಯಿತು.
ದತ್ತನಗರ ನಿವಾಸಿಗಳ ಸಂಘದ ಅಧ್ಯಕ್ಷ ಶ್ರೀ ಎಚ್.ಕೆ ಪುರುಷೋತ್ತಮ, ಸಾನಿಧ್ಯ ಭಿನ್ನ ಸಾಮರ್ಥ್ಯದ ಶಾಲೆಯ ಸಂಚಾಲಕ ಶ್ರೀ ವಸಂತ ಶೆಟ್ಟಿ, ವಕೀಲೆ ಶ್ರೀಮತಿ ಸುಮನಾ ಶರಣ್, ಪದವು ಫ್ರೆಂಡ್ಸ್ ಕ್ಲಬಿ ನ ಅಧ್ಯಕ್ಷ ಕುಶಾಲ ಕುಮಾರ್, ಸಂಜಯನಗರದ ವಿನೋದ್ ಕುಮಾರ್, ಧರ್ಮಸ್ಥಳಾ ಗ್ರಾಮಾಭಿವೃದ್ಧಿ ಯೋಜನೆಯ ಸ್ವ-ಸಹಾಯ ಸಂಘದ ಅಧ್ಯಕ್ಷೆ ಹೇಮಲತಾ, ಶಿವಶಕ್ತಿ ಸಂಘದ ಅಧ್ಯಕ್ಷ ಶ್ರೀ ಸುರೇಶ್ ಸ್ವಚ್ಛ ಜಾಗೃತಿಯ ಕುರಿತು ಮಾತನಾಡಿದರು.
ಶ್ರೀ ಕೆ.ಸಿ ನಾಕ್ ಮಾತನಾಡಿ ಶಕ್ತಿನಗರದ ನಾಗರಿಕರಾದ ನಾವೆಲ್ಲ ಒಂದಾಗಿ ಈ ನಮ್ಮ ಊರನ್ನು ಮಂಗಳೂರಿನಲ್ಲೇ ಒಂದು ಆದರ್ಶ ಉಪನಗರವನ್ನಾಗಿ ಮಾಡಬೇಕೆಂದು ಕರೆಯಿತ್ತರು. ಶಕ್ತಿ ಎಜ್ಯುಕೇಶನ್ ಟ್ರಸ್ಟಿನ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್, ಪ್ರಧಾನ ಸಲಹೆಗಾರ ರಮೇಶ್ ಕೆ, ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ಪಿ.ಯು ಕಾಲೇಜಿನ ಪ್ರಾಚಾರ್ಯ ಪ್ರಭಾಕರ ಜಿ.ಎಸ್, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ವಿದ್ಯಾ ಕಾಮತ್ ಜಿ., ಶ್ರೀ ಗೋಪಾಲಕೃಷ್ಣ ಪ್ರಿ-ಸ್ಕೂಲಿನ ನೀಮಾ ಸಕ್ಸೇನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಶ್ರೀನಿಧಿ ಅಭಯಂಕರ್ ಕಾರ್ಯಕ್ರಮ ನಿರೂಪಿಸಿದರು.
ಶಕ್ತಿನಗರದ ರಿಕ್ಷಾ ಮಾಲಕರ-ಚಾಲಕರ ಸಂಘ, ದತ್ತನಗರ ನಿವಾಸಿಗಳ ಸಂಘಕ್ಕೆ ಪದವು ಫ್ರೆಂಡ್ಸ್ ಕ್ಲಬ್, ಜ್ಞಾನದೀಪ ಮಹಿಳಾ ಮಂಡಳಿ, ಶ್ರೀ ಕೃಷ್ಣ ಭಜನಾ ಮಂದಿರ, ಹಿಂದು ಜಾಗರಣಾ ವೇದಿಕೆ ವೀರಕೇಸರಿ ಶಾಖೆ, ಮುತ್ತಪ್ಪನ ಗುಡಿ ಕ್ಷೇತ್ರ, ಶಿವ ಶಕ್ತಿ ಫ್ರೆಂಡ್ಸ್ ಸರ್ಕಲ್, ಶ್ರೀ ದುರ್ಗಾ ಮಹಾಮಾಯಿ ದೇವಸ್ಥಾನ, ರಮಾ ಶಕ್ತಿ ಮಿಶನ್, ಶ್ರೀ ರಾಜ ರಾಜೇಶ್ವರಿ ದೇವಸ್ಥಾನ, ಬಾಲಗೋಕುಲ ಶಕ್ತಿನಗರದ ಎಲ್ಲಾ ಕಾರ್ಯಕರ್ತರು ಸ್ವಚ್ಛ ಜಾಗೃತಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ಎಂ.ಆರ್.ಪಿ.ಎಲ್, ನವ ಮಂಗಳೂರು ಬಂದರು ಮಂಡಳಿ, ಅದಾನಿ ಸಮೂಹ, ನಂದಿನಿ, ಕ್ಯಾಂಪ್ಕೊ ಹಾಗೂ ಎಸ್.ಕೆ ಗೋಲ್ಡ್ ಸ್ಮಿತ್ ಇಂಡಸ್ಟಿಯಲ್ ಕೊ-ಆಪರೇಟಿವ್ ಸೊಸೈಟಿ ಇವರು ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ಒದಗಿಸಿ ಸಹಕರಿಸಿದ್ದರು.