ಮಂಗಳೂರು: ಶಕ್ತಿನಗರದ ಶಕಿ ಶಿಕ್ಷಣ ಸಂಸ್ಥೆಯಲ್ಲಿ ಪ್ರಧಾನ ಸಲಹೆಗಾರರಾಗಿರುವ ಕೆ. ರಮೇಶ್ ಇವರನ್ನು ಕರ್ನಾಟಕ ಸರಕಾರ ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರನ್ನಾಗಿ ಆಯ್ಕೆ ಮಾಡಿದ ಸಂದರ್ಭದಲ್ಲಿ ಅವರನ್ನು ಅಭಿನಂದಿಸಲಾಯಿತು. ಶಕ್ತಿ ಪಿ. ಯು. ಕಾಲೇಜು, ಶಕ್ತಿ ವಸತಿ ಶಾಲೆ, ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಸದಸ್ಯರು ಈ ಕಾರ್ಯಕ್ರಮವನ್ನು ಜಂಟಿಯಾಗಿ ಹಮ್ಮಿಕೊಂಡಿದ್ದರು.
ಶಕ್ತಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್ ಅಭಿನಂದನೆಯ ಮಾತುಗಳನ್ನಾಡುತ್ತಾ ರಮೇಶ್ ಅವರ ಕರ್ತೃತ್ವ ಶಕ್ತಿ, ಬದ್ಧತೆ, ಕಾರ್ಯ ಸಹಿಷ್ಣುತೆ, ಪರೋಪಕಾರ ಪ್ರವೃತ್ತಿ, ಸೇವಾ ತತ್ಪರತೆ ಹಾಗೂ ನಾಯಕತ್ವ ಗುಣಗಳ ಬಗ್ಗೆ ಕೊಂಡಾಡಿದರು. ರಮೇಶ್ ತನ್ನ ಆದರ್ಶ ಗುಣಗಳಿಂದ ಸದಾ ಇತರರಿಗೆ ಆದರ್ಶ ಎಂದರು. ಸ್ವಯಂಪ್ರಶಂಸೆ ಹಾಗೂ ಅಹಂ ಅನ್ನು ಮೈಲು ದೂರ ಇಟ್ಟಿರುವ ಅವರು ಓರ್ವ ವ್ಯಕ್ತಿಯಲ್ಲ ಶಕ್ತಿ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ಮಹಾನಗರದ ಸಹ ಸಂಘಚಾಲಕ ಸುನಿಲ್ ಆಚಾರ್, ಹೊಸದಿಗಂತ ಪತ್ರಿಕೆ ಸಂಪಾದಕ ಪ್ರಕಾಶ್ ಇಳಂತಿಲ, ಅಕ್ಷರೋದ್ಯಮ ಸಂಸ್ಥೆಯ ಕಾರ್ಯ ನಿರ್ವಹಣಾಧಿಕಾರಿ ಸುನಿಲ್ ಕುಲಕರ್ಣಿ, ತರ್ಜನಿ ಕಮ್ಯೂನಿಕೇಶನ್ನಿನ ಶೇಷಗಿರಿ, ಎಬಿವಿಪಿ ಮಂಗಳೂರು ವಿಭಾಗದ ಸಂಘಟನಾ ಕಾರ್ಯದರ್ಶಿ ಬಸವೇಶ್, ಹೊಸದಿಗಂತ ಪತ್ರಿಕೆಯ ವ್ಯವಸ್ಥಾಪಕ ದೇವದಾಸ ಶೆಟ್ಟಿ, ಶಕ್ತಿ ಎಜ್ಯುಕೇಶನ್ ಟ್ರಸ್ಟಿನ ಕಾರ್ಯದರ್ಶಿ ಸಂಜಿತ್, ಅಭಿವೃದ್ಧಿ ಅಧಿಕಾರಿ ಪ್ರಕ್ಯಾತ್ ರೈ, ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಕ್ತಿ ಪಿ.ಯು ಕಾಲೇಜಿನ ಪ್ರಾಂಶುಪಾಲ ಪ್ರಭಾಕರ ಜಿ.ಎಸ್ ಸ್ವಾಗತಿಸಿ, ಶಕ್ತಿ ವಸತಿ ಶಾಲೆಯ ಪ್ರಾಚಾರ್ಯರಾಗಿರುವ ವಿದ್ಯಾ ಕಾಮತ್ ಜಿ. ವಂದಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಕ್ತಿ ಸಂಸ್ಥೆಗಳ ಸ್ಥಾಪಕ ಕೆ.ಸಿ ನಾಕ್ ರಮೇಶ್ ಅವರು ಶಕ್ತಿ ಸಂಸ್ಥೆಗಳಿಗೆ ಒಂದು ಆಸ್ತಿ ಎಂದರು. ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ರಮೇಶ್ ಈ ಸನ್ಮಾನ ನನ್ನ ಜವಾಬ್ದಾರಿ ಮತ್ತು ಬದ್ಧತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಶ್ರದ್ಧೆ, ನ್ಯಾಯ, ಪಕ್ಷಪಾತವಿಲ್ಲದ ಪ್ರಾಮಾಣಿಕ ಸೇವೆಯನ್ನು ತಾನು ಸಿಂಡಿಕೇಟ್ ಸದಸ್ಯನಾಗಿ ಸಲ್ಲಿಸುತ್ತೇನೆ, ಆ ಮೂಲಕ ನಾನು ಸೇವೆ ಸಲ್ಲಿಸುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ಹೆಸರು ತರುತ್ತೇನೆ ಎಂದು ತಿಳಿಸಿದರು. ರಮೇಶ್ ದಂಪತಿಗಳನ್ನು ಪ್ರೀತ್ಯಾದರಗಳೊಂದಿಗೆ ಸನ್ಮಾನಿಸಲಾಯಿತು.