ಮಂಗಳೂರು, ಮೇ 26 : ಶಕ್ತಿನಗರದ ಶಕ್ತಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣದ ಅವಕಾಶ ಕಲ್ಪಿಸಲಾಗಿದೆ. ಮೇ 26 ಗುರುವಾರದಂದು ಬೆಳಗ್ಗೆ 9 ಗಂಟೆಗೆ ಶಕ್ತಿ ಕ್ಯಾಂಪಸ್ನ ಮೈದಾನದಲ್ಲಿ ವಾಲಿಬಾಲ್ ಪ್ರತಿಭೆಗಳ ಆಯ್ಕೆ ಪ್ರಕ್ರಿಯೆಯು ನಡೆಯಿತು. 2021-22 ರ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ಹುಡುಗರು ರಾಜ್ಯದ ಹಲವು ಕಡೆಗಳಿಂದ ವಾಲಿಬಾಲ್ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ಈ ವಾಲಿಬಾಲ್ ಆಯ್ಕೆ ಪ್ರಕ್ರಿಯೆಯನ್ನು ಉದ್ಘಾಟಿಸಿ ಮಾತನಾಡಿದ ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ. ಅವರು ಶಕ್ತಿ ವಿದ್ಯಾ ಸಂಸ್ಥೆಯು ಕಲಿಕೆಯ ಜೊತೆಗೆ ವಿವಿಧ ಕ್ರೀಡೆಗಳಿಗೂ ಪ್ರೋತ್ಸಾಹ ನೀಡುತ್ತಿದೆ. ಈಗಾಗಲೇ ಕಬ್ಬಡ್ಡಿ ಪ್ರತಿಭೆಗಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಿರುವ ಶಕ್ತಿ ವಿದ್ಯಾ ಸಂಸ್ಥೆಯು ವಾಲಿಬಾಲ್ ಪ್ರತಿಭೆಗಳಿಗೂ ಸುವರ್ಣ ಅವಕಾಶ ನೀಡಿದೆ. ಈ ಅವಕಾಶ ಬಳಸಿಕೊಂಡು ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಇನ್ನಷ್ಟು ಹೆಸರು ಗಳಿಸುವಂತಾಗಲಿ, ನಮ್ಮ ಸಂಸ್ಥೆಯನ್ನು ನಮ್ಮ ರಾಜ್ಯವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವಂತಾಗಲಿ ಎಂದು ಶುಭ ಹಾರೈಸಿದರು.
ನಂತರ ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪೃಥ್ವಿರಾಜ್ ಅವರು ಮಾತನಾಡಿ ಈ ಕಬ್ಬಡ್ಡಿ ಹಾಗೂ ವಾಲಿಬಾಲ್ ಪ್ರತಿಭೆಗಳಿಗೆ ಉಚಿತ ಶಿಕ್ಷಣವನ್ನು ನೀಡುವುದು ಶಕ್ತಿ ವಿದ್ಯಾ ಸಂಸ್ಥೆಯ ಕನಸು. ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಉತ್ತಮ ಪ್ರದರ್ಶನವನ್ನು ನೀಡಿ ಆ ಮೂಲಕ ಒಂದು ಸದೃಢ ವಾಲಿಬಾಲ್ ತಂಡ ನಮ್ಮ ಶಕ್ತಿ ಪದವಿ ಪೂರ್ವ ಕಾಲೇಜಿನಲ್ಲಿ ರಚನೆಯಾಗಲಿ. ಕ್ರೀಡಾ ಕ್ಷೇತ್ರದಲ್ಲಿ ನಮ್ಮ ಶಕ್ತಿ ವಿದ್ಯಾ ಸಂಸ್ಥೆಯು ಮತ್ತಷ್ಟು ಖ್ಯಾತಿ ಹೊಂದಲಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ವಿದ್ಯಾ ಕಾಮತ್ ಜಿ. ಅವರು ವಾಲಿಬಾಲ್ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಹುಡುಗರಿಗೆ ಹಸ್ತಲಾಘವ ನೀಡಿ ತಮ್ಮ ಶುಭ ಕಾಮನೆಗಳನ್ನು ಅರ್ಪಿಸಿದರು. ಈ ವಾಲಿಬಾಲ್ ಆಯ್ಕೆ ಪ್ರಕ್ರಿಯೆಯಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಹುಡುಗರು ಉತ್ಸಾಹದಿಂದ ಭಾಗವಹಿಸಿದರು. ಶಕ್ತಿ ವಿದ್ಯಾ ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ ವಾಲಿಬಾಲ್ ತರಬೇತುದಾರ ಮನೋಜ್, ದೈಹಿಕ ಶಿಕ್ಷಣ ಶಿಕ್ಷಕಿ ಸುರೇಖಾ, ಪೋಷಕರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು. ಕನ್ನಡ ಶಿಕ್ಷಕ ಶರಣಪ್ಪ ನಿರೂಪಿಸಿ ವಂದಿಸಿದರು.