ಮಂಗಳೂರು, ಜೂ. 21 : ಶಕ್ತಿನಗರದ ಶಕ್ತಿ ವಸತಿ ಶಾಲೆ ಮತ್ತು ಕ್ರೀಡಾ ಭಾರತಿ ಮಂಗಳೂರು ಇದರ ಸಹಯೋಗದಲ್ಲಿ ಶಾಲೆಯ ರೇಷ್ಮಾ ಮೆಮೋರಿಯಲ್ ಸಂಭಾಗಣದಲ್ಲಿ ೮ನೇ ವಿಶ್ವ ಯೋಗದಿನವನ್ನು ಆಚರಿಸಲಾಯಿತು. ದೀಪ ಬೆಳಗಿಸುವುದರ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದಿಗಂತ ಮುದ್ರಣದ ವ್ಯವಸ್ಥಾಪಕರಾಗಿರುವ ರಾಜೇಶ್ ಅವರು ಮಾತನಾಡಿ ಮಾನಸಿಕ ಸ್ಥಿರತೆಯನ್ನು ಕಾಯ್ದುಕೊಳ್ಳಲು ಯೋಗ ಅತೀ ಮುಖ್ಯ, ಆಸನಗಳನ್ನು ಹಾಕುವುದರ ಜೊತೆಗೆ ದಿನ ನಿತ್ಯದ ಚಟುವಟಿಕೆಗಳನ್ನು ಶಿಸ್ತುಬದ್ಧವಾಗಿ ನಡೆಸಲು ಯೋಗ ಸಹಕಾರಿ, ಪ್ರಪಂಚಕ್ಕೆ ಭಾರತ ದೇಶದ ಕೊಡುಗೆ ಅಂದರೆ ಅದು ಯೋಗ. ಯೋಗಭ್ಯಾಸದಿಂದ ದೈಹಿಕ ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ಮಾನಸಿಕ ಒತ್ತಡಗಳನ್ನು ನಿಭಾಯಿಸಲು ನಿಯಂತ್ರಿಸಲು ಯೋಗ ಸಹಕಾರಿಯಾಗಿದೆ ಎಂದು ತಿಳಿಸಿದರು.
ನಂತರ ವಾರ್ಡ್ 21 ರ ಕಾರ್ಪೋರೇಟರ್ ಆಗಿರುವ ವನಿತಾ ಪ್ರಸಾದ ಅವರು ಮಾತನಾಡಿ ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಯೋಗವನ್ನು ಕಲಿಯಬೇಕು ಮತ್ತು ಯೋಗದಿಂದ ಸಂಸ್ಕಾರವನ್ನು ರೂಢಿಸಿಕೊಳ್ಳಬಹುದು ಎಲ್ಲರಿಗೂ ಯೋಗದಿನದ ಶುಭಾಷಯಗಳನ್ನು ಸಲ್ಲಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಕ್ತಿ ವಸತಿ ಶಾಲೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ. ಅವರು ಮಾತನಾಡಿ ಇಂದು ವಿಶ್ವದ ಮೂಲೆ-ಮೂಲೆಯಲ್ಲಿ ಯೋಗದಿನವನ್ನು ಆಚರಿಸಲಾಗುತ್ತದೆ. ವಿದ್ಯಾರ್ಥಿಗಳ ಜೀವನದಲ್ಲಿ ಯೋಗ ಬಹಳ ಮುಖ್ಯ ದೈಹಿಕ ಸದೃಢತೆಯನ್ನು ಕಾಯ್ದುಕೊಳ್ಳಲು ಯೋಗ ಅತೀ ಅವಶ್ಯಕ. ದಿನನಿತ್ಯ ಯೋಗಭ್ಯಾಸವನ್ನು ಮಾಡೋಣ ಎಂದು ಹೇಳಿದರು.
ರಾಷ್ಟೀಯ ಯೋಗ ತರಬೇತುದಾರರಾದ ಸುಭದ್ರ ಮತ್ತು ಕಲ್ಪ ಭಟ್ ಅವರಿಂದ ವಿದ್ಯಾರ್ಥಿಗಳಿಗೆ ಯೋಗಾಸನಗಳ ತರಬೇತಿ ನಡೆಯಿತು. ವಿದ್ಯಾರ್ಥಿಗಳು ಉತ್ಸುಕತೆಯಿಂದ ಯೋಗ ತರಬೇತಿಯಲ್ಲಿ ಪಾಲ್ಗೊಂಡರು. ಜಿಲ್ಲಾ ಕ್ರೀಡಾ ಭಾರತೀಯ ಕಾರ್ಯದರ್ಶಿಗಳಾದ ಕ್ರಷ್ಣ ಶೆಟ್ಟಿ, ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ಪ್ರಥ್ವಿರಾಜ್, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ ಜಿ. ಕಾಮತ್, ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಿಕ್ಷಕರು-ಶಿಕ್ಷಕೇತರ ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.