ಮಂಗಳೂರು ಆ. 11 : ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪಪೂ ಕಾಲೇಜು ವತಿಯಿಂದ ಇಂದು ರಕ್ಷಾಬಂಧನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿನಿಯರು ಪ್ರತಿಯೊಬ್ಬ ವಿದ್ಯಾರ್ಥಿಗೂ ದೀಪದ ಆರತಿಯನ್ನು ಬೆಳಗಿ ತಿಲಕವನ್ನಿಟ್ಟು ಶುಭ ಹಾರೈಸಿದರು.
ನಂತರ ಶಕ್ತಿ ಶಿಕ್ಷಣ ಸಂಸ್ಥೆಯ ಪ್ರಧಾನ ಸಲೆಹಗಾರ ರಮೇಶ ಕೆ. ಮಾತನಾಡಿ ರಕ್ಷೆಯು ಸೋದರ – ಸೋದರಿಯರ ಹಬ್ಬ. ಇಂದು ನಾವು ಬೇರೆ ಬೇರೆ ಮನೆಯಿಂದ, ಜಿಲ್ಲೆಯಿಂದ ಬಂದು ಇಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದೇವೆ. ನಾವು ಜಾತಿ ಬೇಧ ಭಾವ ಮತದಿಂದ ದೂರ ಉಳಿದು ನಾವೆಲ್ಲರೂ ಒಂದು ಎಂಬ ಭಾವನೆಯಲ್ಲಿ ಒಂದು ಗೂಡಿ ಇರಬೇಕು. ನಮ್ಮ ರಾಷ್ಟ್ರದ ಪರಿಕಲ್ಪನೆಯನ್ನು ಮುಂದಿಟ್ಟು ಮುಂದಿನ ದಿನಗಳಲ್ಲಿ ರಾಷ್ಟ್ರದ ಪ್ರಗತಿಗೆ ಕಾರ್ಯಪ್ರವೃತ್ತರಾಗಬೇಕು. ಈ ಮೂಲಕ ಅನಾದಿ ಕಾಲದಿಂದ ಬಂದ ಸಂಸ್ಕೃತಿಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕನ್ನಡ ಅಧ್ಯಾಪಕರಾದ ಶರಣಪ್ಪ ಇವರು ಪುರಾಣದ ಹಿನ್ನಲೆಯನ್ನು ತಿಳಿಸಿದರು. ಸಂಸ್ಕೃತ ಉಪನ್ಯಾಸಕರಾದ ಶ್ರೀಯುತ ರವಿಶಂಕರ್ ಹೆಗ್ಡೆ ಇವರು ಪರಸ್ಪರ ರಕ್ಷೆ ಕಟ್ಟುವಾಗ ಶ್ಲೋಕದ ಮೂಲಕ ವಿವರಣೆ ನೀಡಿದರು. ಸಂಸ್ಥೆಯ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ರಕ್ಷೆ ಕಟ್ಟುವುದರ ಮೂಲಕ ರಕ್ಷಾಬಂಧನ ಆಚರಿಸಿದರು. ಶಕ್ತಿ ವಿದ್ಯಾ ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ ಉಪಸ್ಥಿತರಿದ್ದರು.a