ಮಂಗಳೂರು ನ. 26: ಶಕ್ತಿನಗರದ ಶಕ್ತಿ ಪದವಿ ಪೂರ್ವ ಕಾಲೇಜಿನಲ್ಲಿ ಜೂನಿಯರ್ ರೆಡ್ಕ್ರಾಸ್ ಘಟಕದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಉದ್ಘಾಟನೆಯನ್ನು ದಕ್ಷಿಣ ಕನ್ನಡ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಸಿ.ಎ ಶಾಂತರಾಮ್ ಶೆಟ್ಟಿಯವರು ನೆರವೇರಿಸಿದರು. ನಂತರ ಮಾತನಾಡಿದ ಅವರು ನಾವು ಸಮಾಜದ ಬಗ್ಗೆ ಚಿಂತನೆ ಮಾಡಿದಾಗ ಮಾತ್ರ ಸಮಾಜಪರ ಸೇವೆಯನ್ನು ಮಾಡಲು ಸಾಧ್ಯ ಎಂದರು. ದೇವರಲ್ಲಿ ನಂಬಿಕೆ ಇಡಿ, ಮೂಢನಂಬಿಕೆಯನ್ನು ತ್ಯಜಿಸಿ. ಜನ ಸೇವೆ ಮಾಡಿ ಎಂಬ ಅಮೂಲ್ಯ ಸಲಹೆಯನ್ನು ನೀಡಿದರು. ದ.ಕ ಜಿಲ್ಲೆಯಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಕೋವಿಡ್ನಂತಹ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿಯೂ ನಿರಂತರವಾಗಿ ಸಾಮಾಜಿಕವಾಗಿ ಕೆಲಸ ಮಾಡಿದ್ದಾರೆ. ವಿದ್ಯಾರ್ಥಿಗಳು ನಿಸ್ವಾರ್ಥ ಮನೋಭಾವನೆಯನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಸಂಸ್ಥೆಯ ಸಲಹೆಗಾರರಾದ ಶ್ರೀಯುತ ರಮೇಶ್ ಕೆ. ವಹಿಸಿ ಮಾತನಾಡಿ, ರಕ್ತದ ಅವಶ್ಯಕತೆ ಜನರಿಗೆ ತುಂಬಾ ಇದೆ. ಸಮಾಜದ ಬಗ್ಗೆ ಕಾಳಜಿ ವಹಿಸುತ್ತಾ ಸಾಮಾಜಿಕ ಸೇವೆಯನ್ನು ಮಾಡುತ್ತ ರೋಗಿಗಳಿಗೆ ಅವಶ್ಯಕತೆ ಇದ್ದಾಗ ರಕ್ತ ದಾನ ಮಾಡುಬೇಕೆಂದು ಕರೆ ನೀಡಿದರು. ರೆಡ್ ಕ್ರಾಸ್ ಸಂಸ್ಥೆಯ ಜೂನಿಯರ್ ಕೌನ್ಸಿಲರ್ ಆಗಿ ಉಪನ್ಯಾಸಕಿ ಪ್ರಗತಿ ಸಾಂಕ್ರಾಮಿಕ ಕಾಯಿಲೆಗಳ ಕುರಿತಂತೆ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.
ವೇದಿಕೆಯಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪೃಥ್ವಿರಾಜ್ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳ ಪರಿಚಯವನ್ನು ವಿಜ್ಞಾನ ಉಪನ್ಯಾಸಕಿ ದಿವ್ಯ ಪರಿಚಯಿಸಿದರೆ, ಉಪನ್ಯಾಸಕಿ ಅಕ್ಷತ ವಂದಿಸಿದರು. ಉಪನ್ಯಾಸಕರಾದ ಅವಿನ್ ಎರಿಕ್ ಕುಟಿನ್ಹ ನಿರೂಪಿಸಿದರು. ವಿದ್ಯಾರ್ಥಿ ನಿಹಾಲ್, ಮೌನರವರನ್ನು ಘಟಕದ ಪ್ರತಿನಿಧಿಗಳಾಗಿ ನೇಮಿಸಲಾಯಿತು. ವಿದ್ಯಾರ್ಥಿನಿ ಸ್ಪೂರ್ತಿ ಪ್ರಾರ್ಥಿಸಿದರು.