ಮಂಗಳೂರು ಜೂ. 5 : ಮಂಗಳೂರಿನ ಶಕ್ತಿ ವಸತಿ ಶಾಲೆ ಹಾಗೂ ಶಕ್ತಿ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮವು ಶಾಲಾ ಪ್ರಾರ್ಥನೆಯೊಂದಿಗೆ ಆರಂಭವಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಿಟ್ಟೆಲ್ ಮೆಮೋರಿಯಲ್ ಪಿ. ಯು ಕಾಲೇಜಿನ ಪ್ರಾಂಶುಪಾಲರು ಹಾಗೂ ದಕ್ಷಿಣ ಕನ್ನಡ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಉಪಾಧ್ಯಕ್ಷರಾದ ಶ್ರೀ ವಿಠಲ್ ಅವರು ಮಕ್ಕಳಿಗೆ ಗಿಡಗಳನ್ನು ಕೊಡುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಕ್ತಿವಸತಿ ಶಾಲೆಯ ವಿದ್ಯಾರ್ಥಿ ವಂಶಿ ಕೃಷ್ಣ ದಿನದ ಮಹತ್ವದ ಕುರಿತಂತೆ ಮಾತನಾಡಿದರು. ಶಕ್ತಿ ವಸತಿ ಶಾಲೆಯ ವಿದ್ಯಾರ್ಥಿಗಳು ಪರಿಸರ ಗೀತೆಯನ್ನು ಹಾಡುವುದರ ಮೂಲಕ ಪರಿಸರ ಜಾಗೃತಿ ಮಾಡಿದರು.
ನಂತರ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ವಿಠಲ ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಾ ಮಕ್ಕಳು ಪರಿಸರದ ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು, ಈ ವರ್ಷದ ಧ್ಯೇಯ ವಾಕ್ಯದಂತೆ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು. ನಮ್ಮ ದಿನನಿತ್ಯ ವಸ್ತುಗಳನ್ನು ಅಂಗಡಿಯಿಂದ ತರುವಾಗಲೂ ಪ್ಲಾಸ್ಟಿಕ್ ಬ್ಯಾಗ್ ಗಳನ್ನು ಬಳಸದೇ ವಸ್ತ್ರದ ಚೀಲಗಳನ್ನು ಮತ್ತು ಮರುಬಳಕೆ ಮಾಡಬಹುದಾದ ಚೀಲಗಳನ್ನು ಬಳಸಬೇಕು ಎಂದರು. ತ್ರಿಬಲ್ ಆರ್ ಸೂತ್ರವನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡುತ್ತಾ ರಿಜೆಕ್ಟ್, ರೀಯೂಸ್ ಮತ್ತು ರೀಸೈಕಲ್ ಎಂಬ ಮೂರು ವಿಧಾನದಲ್ಲಿ ಪ್ಲಾಸ್ಟಿಕ್ ವಸ್ತು ಬಳಕೆಯನ್ನು ನಿಲ್ಲಿಸುವುದು, ಪುನರ್ಬಳಕೆ ಮಾಡುವುದು ಅಥವಾ ರೂಪಾಂತರ ಗೊಳಿಸಿ ಬಳಕೆ ಮಾಡುವುದರಿಂದ ಪರಿಸರವನ್ನು ಸಂರಕ್ಷಿಸಬಹುದು ಹಾಗೂ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಗೊಳಿಸಬಹುದು ಎಂದು ಅಭಿಪ್ರಾಯ ಪಟ್ಟರು.
ಸಂಸ್ಥೆಯ ಪ್ರಧಾನ ಸಲಹೆಗಾರರಾದ ಶ್ರೀ ರಮೇಶ್ ಕೆ. ಮಾತನಾಡಿ ನೀರು ಅತ್ಯಂತ ಅಮೂಲ್ಯವಾದ ವಸ್ತು. ನೀರಿನ ಬಳಕೆಯ ಬಗ್ಗೆ ನಾವೆಲ್ಲರೂ ಗಮನ ಹರಿಸಬೇಕು. ನೀರು ಹಾಗೂ ವಿದ್ಯುತ್ತಿನ ಮಿತವ್ಯಯವನ್ನು ನಾವು ಈಗಿನಿಂದಲೇ ರೂಢಿಸಿಕೊಂಡರೆ ಹೆಚ್ಚು ಅನಾನುಕೂಲವಾಗುತ್ತದೆ. ನಮ್ಮ ನಮ್ಮ ಮನೆಗಳಲ್ಲಿ ಮತ್ತು ಶಾಲೆಯ ಆವರಣದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲ ರವಿಶಂಕರ ಹೆಗಡೆ ಮಾತನಾಡಿ ನಮ್ಮ ಪರಿಸರವನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ, ಈ ಸ್ವಚ್ಛತೆ ನಮ್ಮ ವಸತಿ ನಿಲಯದ ಕೊಠಡಿ, ನಮ್ಮ ತರಗತಿ ಕೊಠಡಿಗಳಿಂದಲೇ ಆರಂಭವಾಗಬೇಕು ಎಂದು ಹೇಳಿದರು.
ಕನ್ನಡ ಶಿಕ್ಷಕ ಶರಣಪ್ಪ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ಪ್ರಿಯಾಂಕಾ ರೈ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಶಾಲೆಯ ಎಲ್ಲ ವಿದ್ಯಾರ್ಥಿಗಳು ಶಿಕ್ಷಕ- ಶಿಕ್ಷಕೇತರ ಸಿಬ್ಬಂಧಿಗಳು ಉಪಸ್ಥಿತರಿದ್ದರು. ನಂತರ ನೂರಾರು ವಿದ್ಯಾರ್ಥಿಗಳು ಶಾಲೆಯ ಆವರಣದಿಂದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮುಖ್ಯ ರಸ್ತೆಯಲ್ಲಿ ಪ್ಲಾಸ್ಟಿಕ್ ಹೆಕ್ಕುವುದರ ಮೂಲಕ ಸ್ವಚ್ಛತಾ ಅಭಿಯಾನ ನಡೆಸುವುದರ ಮೂಲಕ ಪರಿಸರದವರನ್ನು ಜಾಗೃತಿಗೊಳಿಸಿದರು.