ಮಂಗಳೂರು : ಶಕ್ತಿನಗರದ ಶಕ್ತಿ ವಸತಿ ಶಾಲೆ ಮತ್ತು ಶಕ್ತಿ ಪದವಿ ಪೂರ್ವ ಕಾಲೇಜಿನ ವತಿಯಿಂದ ಇಂದು ಶಕ್ತಿ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಶಕ್ತಿ ಕ್ಯಾನ್ ಕ್ರಿಯೇಟ್ ದಸರಾ ರಜಾಕಾಲದ ಶಿಬಿರದ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ಸುದಾನ ವಸತಿ ಶಾಲೆ ಪುತ್ತೂರು ಇದರ ಸಂಚಾಲಕರಾದ ವಂದನೀಯ ವಿಜಯ ಹಾರ್ವಿನ್ ನೆರವೇರಿಸಿದರು.
ಉದ್ಘಾಟಿಸಿ ಮಾತನಾಡಿದ ವಂದನೀಯ ವಿಜಯ ಹಾರ್ವಿನ್, ಇಂದಿನ ಮಕ್ಕಳು ಪಾಠದ ಜೊತೆ ಆಟವಾಡಬೇಕು. ಶಾಲೆಗಳು ಮಕ್ಕಳನ್ನು ಅಂಕ ಪಡೆಯಲು ತಯಾರು ಮಾಡುವ ಕೇಂದ್ರಗಳು ಆಗಬಾರದು. ದೇಶದ ಭವಿಷ್ಯದ ದೃಷ್ಠಿಯಿಂದ ಅವರ ವ್ಯಕ್ತಿತ್ವದ ವಿಕಸನದ ಕಡೆಗೆ ಗಮನ ನೀಡಬೇಕು. ವ್ಯಕ್ತಿತ್ವದ ವಿಕಸನವಾದಾಗ ಮಾತ್ರ ಸಮಾಜ ಬದಲಾವಣೆಯಾಗಬಹುದು. ಮಕ್ಕಳಲ್ಲಿರುವ ಒಳ್ಳೆಯ ಗುಣಗಳನ್ನು ಗುರುತಿಸುವ ಜಾಣತನ ನಮ್ಮ ಅಧ್ಯಾಪಕರಿಗೆ ಇರಬೇಕು. ಆಸಕ್ತಿಗೆ ಅನುಗುಣವಾಗಿ ಮಕ್ಕಳಲ್ಲಿ ಬದಲಾವಣೆ ತರಲು ಪ್ರಯತ್ನಿಸಬೇಕು.
ಡಾ. ಶಿವರಾಮ ಕಾರಂತರ ನಲಿ – ಕಲಿ ಕಲ್ಪನೆಯು ಇಂದಿನ ಕಾಲಕ್ಕೆ ಪ್ರಸ್ತುತವಾಗಿದೆ ಎಂದು ಹೇಳಿದರು. ಪೋಷಕರು ಮತ್ತು ಅಧ್ಯಾಪಕರು ಮಕ್ಕಳ ಪ್ರತಿಭೆಯನ್ನು ಗುರುತಿಸುವ ಮಹತ್ತರವಾದ ಕಾರ್ಯವನ್ನು ಮಾಡಬೇಕೆಂದು ಕರೆ ನೀಡಿದರು. ಇಂತಹ ಶಿಬಿರವು ನೂರಾರು ವಿದ್ಯಾರ್ಥಿಗಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಸಹಾಯಕವಾಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಶ್ರೀಮತಿ ಅಖಿಲಾ ಆಳ್ವ ಮಕ್ಕಳಿಗೆ ಟಿ.ವಿ ಹಾಗೂ ಇನ್ನಿತರ ಮಾಧ್ಯಮದಿಂದ ಸಿಗುವುದಕ್ಕಿಂತ ಹೆಚ್ಚಿನ ಅನುಭವ ಇಂತಹ ಶಿಬಿರದಿಂದ ಲಭಿಸುತ್ತದೆ. ಇಂತಹ ಶಿಬಿರದ ಉಪಯೋಗವನ್ನು ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕೋಸ್ಕರ ಉಪಯೋಗಿಸಿಕೊಳ್ಳಬೇಕು. ಬೇರೆ ಬೇರೆ ಸಂಪನ್ಮೂಲ ವ್ಯಕ್ತಿಗಳಿಂದ ಒಳ್ಳೆಯ ವಿಚಾರಗಳು ಮಕ್ಕಳಿಗೆ ಪ್ರಯೋಜನವಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಕೆ.ಸಿ ನಾಯ್ಕ್ ವಹಿಸಿದರು. ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯೆ ಸಗುಣ ಸಿ. ನಾಯ್ಕ್, ಪ್ರಧಾನ ಸಲಹೆಗಾರ ರಮೇಶ ಕೆ., ಅಭಿವೃದ್ಧಿ ಅಧಿಕಾರಿ ನಸೀಮ್ ಬಾನು ಮತ್ತು ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯ ಸಂಚಾಲಕಿ ನೀಮಾ ಸಕ್ಸೇನಾ ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಸಂಸ್ಥೆಯ ಆಡಳಿತಾಧಿಕಾರಿ ಶ್ರೀ ಬೈಕಾಡಿ ಜನಾರ್ದನ ಆಚಾರ್, ಸ್ವಾಗತವನ್ನು ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶ್ರೀ ಪ್ರಭಾಕರ ಜಿ.ಎಸ್ ವಂದನಾರ್ಪಣೆಯನ್ನು ಕಾಲೇಜಿನ ಉಪನ್ಯಾಸಕಿ ಶಶಿಕಲಾ ನೆರೆವೇರಿಸಿದರು.