ಶಕ್ತಿನಗರದ ಶಕ್ತಿ ವಸತಿ ಶಾಲೆ ಹಾಗೂ ಶಕ್ತಿ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳಿಗೆ ಕದ್ರಿ ಸಂಚಾರ ಪೋಲಿಸ್ ಠಾಣೆಯ ಸಹಾಯಕ ಆರಕ್ಷಕ ನಿರೀಕ್ಷಕ ಶ್ರೀ ಡೊಂಬಯ್ಯ, ಹೆಡ್ ಕಾನ್ಸ್ಟೇಬಲ್‌ಗಳಾಗಿರುವ ಶ್ರೀ ಸಂಜೀವ ಮತ್ತು ತಸ್ಲೀಮ್ ಅರಿಫ್ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸಂಚಾರ ಸುರಕ್ಷತೆಯ ಬಗ್ಗೆ ಪೂರ್ಣ ಮಾಹಿತಿ ನೀಡಿದರು.
ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದರಿಂದ ಹಾಗೂ ವಾಹನ ನಿಬಿಡ ರಸ್ತೆಗಳಲ್ಲಿ ಸಂಚರಿಸುವಾಗ ಪ್ರತಿಯೊಬ್ಬ ವಾಹನ ಸವಾರನೂ ಅತೀ ಎಚ್ಚರದಿಂದ ವಾಹನ ಚಲಾಯಿಸಬೇಕು ಮಾತ್ರವಲ್ಲದೆ ಯಾವುದೇ ಸಂದರ್ಭದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಬಾರದು, ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆ ಸವಾರರು ಮಾತ್ರವಲ್ಲ ಪಾದಚಾರಿಗಳ ಜೀವಕ್ಕೆ ಕೂಡ ಕುತ್ತು ತಂದೊಡ್ಡುತ್ತದೆ ಎಂದು ಅವರು ಹೇಳಿದರು. ಹದಿನೆಂಟು ವರ್ಷವಯೋಮಾನ ದಾಟದವರು ಎಂದೂ ವಾಹನ ಚಲಾಯಿಸುವ ಹುಚ್ಚಿಗೆ ಬಲಿಯಾಗಬಾರದು ಎಂದು ಎಚ್ಚರಿಕೆ ನೀಡಿದರು.
ವಿದ್ಯಾರ್ಥಿಗಳು ಸಂಚಾರ ನಿಯಮಗಳ ಕುರಿತಾಗಿ ಕೇಳಿದ ಹತ್ತು ಹಲವಾರು ಪ್ರಶ್ನೆಗಳಿಗೆ ಪೋಲಿಸ್ ಅಧಿಕಾರಿಗಳು ಸಮರ್ಪಕ ಉತ್ತರ ನೀಡಿದರು ಮಾತ್ರವಲ್ಲದೆ ವಿದ್ಯಾರ್ಥಿಗಳಲ್ಲಿ ರಸ್ತೆ ಸುರಕ್ಷತೆಯ ಕುರಿತಾಗಿ ಜಾಗೃತಿ ಮೂಡಿಸಿದರು.
ಶಕ್ತಿ ವಸತಿ ಶಾಲೆಯ ಪ್ರಾಚಾರ್ಯ ವಿದ್ಯಾ ಕಾಮತ್ ಜಿ. ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತ ಬಯಸಿದರು. ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್, ಕಾಲೇಜಿನ ಪ್ರಾಚಾರ್ಯ ಪ್ರಭಾಕರ ಜಿ.ಎಸ್, ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ನಸೀಮ್ ಬಾನು, ಪ್ರಧಾನ ಸಲಹೆಗಾರ ರಮೇಶ್ ಕೆ. ಮೊದಲಾದವರು ಉಪಸ್ಥಿತರಿದ್ದರು.