ಶಕ್ತಿನಗರ : ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ಪಿ.ಯು. ಕಾಲೇಜಿನಲ್ಲಿ ಪೋಷಕರಿಗೆ ಹಾಗೂ ಹೊಸತಾಗಿ ಸೇರಿರುವ ವಿದ್ಯಾರ್ಥಿಗಳಿಗೆ ಕಾಲೇಜಿನ ಬಗ್ಗೆ ಪೂರ್ಣ ಮಾಹಿತಿ ನೀಡುವ ಕಾರ್ಯಕ್ರಮವನ್ನು ಮೇ 29 ರಂದು ಹಮ್ಮಿಕೊಳ್ಳಲಾಗಿತ್ತು.
ರಾಜ್ಯದ ಹಾಗೂ ಹೊರರಾಜ್ಯದ ಬೇರೆ ಬೇರೆ ಭಾಗಗಳಿಂದ ಆಗಮಿಸಿದ ವಿದ್ಯಾರ್ಥಿಗಳ ಪೋಷಕರನ್ನು ಉದ್ದೇಶಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಶ್ರೀ ಪ್ರಭಾಕರ ಜಿ.ಎಸ್. ಕಾಲೇಜು ಅಂತಾರಾಷ್ಟ್ರೀಯ ಮಟ್ಟದ ಕಟ್ಟಡ ಹಾಗೂ ಸೌಲಭ್ಯಗಳನ್ನು ಹೊಂದಿದ್ದು ವಿಶಾಲ ಆಟದ ಮೈದಾನ ಮತ್ತು ಈಜುಕೊಳ ಇಲ್ಲಿದೆ. ವಿದ್ಯಾರ್ಥಿಗಳಿಗೆ ಅತ್ಯುತ್ತಮ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇಲ್ಲಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗುವುದಲ್ಲದೆ ಜೀವನದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಅವರನ್ನು ತರಬೇತುಗೊಳಿಸಲಾಗುವುದು ಎಂದು ತಿಳಿಸಿದರು. ಅತ್ಯುತ್ತಮ ನುರಿತ ಹಾಗೂ ಅನುಭವಿ ಶಿಕ್ಷಕರನ್ನು ನಮ್ಮ ಕಾಲೇಜು ಹೊಂದಿದೆ ಎಂದರು.
ಕಾಲೇಜಿನ ವಿಜ್ಞಾನದ ವಿಷಯಗಳ ಬಗ್ಗೆ ಪ್ರಾಧ್ಯಾಪಕ ಡಾ| ದರ್ಶನ್‌ರಾಜ್, ಕಾಮರ್ಸ್‌ನ ಕುರಿತಾಗಿ ಪ್ರಾಧ್ಯಾಪಕಿ ಶ್ರೀಮತಿ ಶಿಲ್ಪಾ ಪೂರ್ಣ ಮಾಹಿತಿ ನೀಡಿದರು.
ಆರಂಭದಲ್ಲಿ ಗಣಿತ ಪ್ರಾಧ್ಯಾಪಕಿ ಶ್ರೀಮತಿ ನಯನ ಪ್ರಸಾದ್ ಸ್ವಾಗತಿಸಿ, ಕೊನೆಯಲ್ಲಿ ಶ್ರೀಮತಿ ಶ್ರೀಲೇಖಾ ವಂದಿಸಿದರು. ಅರ್ಥಶಾಸ್ತ್ರದ ಉಪನ್ಯಾಸಕಿ ಶ್ರೀಮತಿ ಪ್ರೀತಿ ಕೀಕಾನ ಕಾರ್ಯಕ್ರಮ ನಿರೂಪಿಸಿದರು. ಶಕ್ತಿ ಎಜುಕೇಶನ್ ಟ್ರಸ್ಟ್‌ನ ಆಡಳಿತಾಧಿಕಾರಿ ಶ್ರೀ ಬೈಕಾಡಿ ಜನಾರ್ದನ ಆಚಾರ್, ಆಡಳಿತ ಮಂಡಳಿಯ ಟ್ರಸ್ಟಿ ಡಾ. ಮುರಳೀಧರ ನಾೖಕ್, ಪ್ರಧಾನ ಸಲಹೆಗಾರ ಶ್ರೀ ರಮೇಶ್ ಕೆ, ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಶ್ರೀಮತಿ ನಸೀಮ್ ಬಾನು, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ವಿದ್ಯಾ ಕಾಮತ್ ಜಿ. ಉಪಸ್ಥಿತರಿದ್ದರು.