ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪ. ಪೂ. ಕಾಲೇಜಿನ ಅಧ್ಯಾಪಕರಿಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತಂತೆ ಕಾರ್ಯಗಾರ ಆಯೋಜಿಸಲಾಗಿತ್ತು. ಕಾರ್ಯಗಾರವನ್ನು ಬೆಳಗಾವಿ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಅರುಣ ಶಹಾಪುರ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿರುವುದು ಆತಂಕಕಾರಿ ವಿಷಯ. ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ದೃಷ್ಠಿಯಿಂದ ಕೇಂದ್ರ ಸರ್ಕಾರವು ಇಸ್ರೋದ ಮಾಜಿ ಅಧ್ಯಕ್ಷರು ಹಾಗೂ ವಿಜ್ಞಾನಿಯು ಆಗಿರುವ ಕಸ್ತೂರಿರಂಗನ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2019 ರ ಕರಡನ್ನು ಸರ್ಕಾರಕ್ಕೆ ಸಲ್ಲಿಸಿದೆ.
ಈ ದೇಶದಲ್ಲಿ ಭಾರತೀಯತೆಯ ಶಿಕ್ಷಣವನ್ನು ಜಾರಿಗೆ ತರಬೇಕು. ಆ ಶಿಕ್ಷಣದಲ್ಲಿ ಕೌಶಲ್ಯವು ಸೇರಿರಬೇಕೆಂಬುದು ಸಮಿತಿಯ ಸಲಹೆ. ಒಂದು ಮಗು ತನ್ನ ಮೂರು ವರ್ಷದಲ್ಲಿ ಶಿಕ್ಷಣವನ್ನು ಪಡೆಯಲು ಶಾಲೆಗೆ ಹೋಗಬೇಕು. ಆ ಮಗು ಒಂದು ವಸ್ತುವನ್ನು ನೋಡುತ್ತಾ ಶಿಕ್ಷಣ ಪಡೆಯಬೇಕು. ಈ ಶಿಕ್ಷಣವನ್ನು ನೀಡಬೇಕಾದ ಶಿಕ್ಷಕರು ಬದಲಾಗಬೇಕು. ಅದಕ್ಕೋಸ್ಕರ ನಾಲ್ಕು ವರ್ಷದ ಬಿಎಡ್ ಶಿಕ್ಷಣವನ್ನು ಪರಿಚಯಿಸಲು ಕರಡು ಪ್ರತಿಯಲ್ಲಿ ಸೂಚಿಲಾಗಿದೆ. ಶಿಕ್ಷಕರು ಮಗುವನ್ನು ಜೀವನ ನಡೆಸಲು ಬೇಕಾಗಿರುವ ಕೌಶಲ್ಯವನ್ನು ಕಲಿಸಿ ಕೊಡುವ ರೀತಿಯಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಇದೆ.
ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಗುಣಮಟ್ಟದ ಶಿಕ್ಷಣ ಕೊಡುವುದಕ್ಕೋಸ್ಕರ ಸಿದ್ದಗೊಳಿಸಲು ಈ ನೀತಿ ಸಾಧ್ಯವಾಗಲಿದೆ. ಇದು ಯಾವುದೇ ಖಾಸಗಿ / ಸರ್ಕಾರಿ / ಅನುದಾನಿತ ಶಾಲೆಗಳಿಗೆ ಮಾರಕವಲ್ಲ ಅದು ಪೂರಕವಾಗಲಿದೆ ಎಂದು ಹೇಳಿದರು. ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಸ್ವಯಂ ಉದ್ಯೋಗವನ್ನು ಸೃಷ್ಟಿಸಲು ಸಾಧ್ಯವಿದೆ. ದೇಶ ಪ್ರಗತಿಯತ್ತ ಸಾಗಲಿದೆ ಎಂದು ಹೇಳಿದರು. ಈಗಾಗಲೇ ದೇಶದಲ್ಲಿ 2 ಲಕ್ಷ ಜನರು ಈ ಕರಡುನಲ್ಲಿ ಅನೇಕ ಹೊಸ ವಿಷಯವನ್ನು ಸೇರಿಸುವ ತಿದ್ದುಪಡಿಯನ್ನು ಕಳುಹಿಸಿ ಕೊಟ್ಟಿರುವುದು ನೋಡಿದರೆ ದೇಶದಲ್ಲಿ ಇಂತಹ ರಾಷ್ಟ್ರೀಯ ಶಿಕ್ಷಣ ನೀತಿಯ ಅವಶ್ಯಕತೆಯಿದೆ ಎಂಬುವುದು ಮೇಲ್ನೋಟಕ್ಕೆ ಕಾಣುತ್ತದೆ ಎಂದು ಹೇಳಿದರು. ಆದ್ದರಿಂದ ನಾವೆಲ್ಲ ಶಿಕ್ಷಕರು ನಮ್ಮ ನಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮುಂದಾಗಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕರಾದ ಶ್ರೀ ಕೆ.ಸಿ ನಾೖಕ್, ಟ್ರಸ್ಟಿ ಮುರಳೀಧರ ನಾೖಕ್, ಪ್ರಧಾನ ಸಲಹೆಗಾರ ರಮೇಶ್ ಕೆ., ಶಕ್ತಿ ಪ ಪೂ ಕಾಲೇಜಿನ ಪ್ರಾಂಶುಪಾಲರಾದ ಪ್ರಭಾಕರ ಜಿ. ಎಸ್, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲರಾದ ವಿದ್ಯಾ ಕಾಮತ್ ಜಿ. ಹಾಗೂ ಅಧ್ಯಾಪಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಧನ್ಯವಾದವನ್ನು ಉಪನ್ಯಾಸಕಿ ಶಿಲ್ಪ ಸಲ್ಲಿಸಿದರು.