ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಮಹಾತ್ಮ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಆಚರಣೆ
ಮಂಗಳೂರು : ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆ, ಶಕ್ತಿ ಪದವಿ ಪೂರ್ವ ಕಾಲೇಜು ಮತ್ತು ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯ ಜಂಟಿ ಆಶ್ರಯದಲ್ಲಿ ಇಂದು ಮಹಾತ್ಮಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ವಿಶ್ವವಿದ್ಯಾನಿಲಯ ಕಾಲೇಜು ಹಂಪನಕಟ್ಟೆಯ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ. ಮಾಧವ್ ಎಂ.ಕೆ ಆಗಮಿಸಿ ಮಾತನಾಡಿ ಮಹಾತ್ಮಗಾಂಧಿಯವರು ನಡೆ, ನುಡಿ ಹಾಗೂ ಸತ್ಯತೆಯಿಂದ ರಾಷ್ಟ್ರಪಿತ ಸ್ಥಾನವನ್ನು ಪಡೆದರು. ದೇಶದಲ್ಲಿದ್ದ ಬಡತನಕ್ಕೋಸ್ಕರ ತಾನು ಐಶಾರಾಮಿ ಜೀವನ ನಡೆಸದೆ ಜನರ ಮಧ್ಯೆ ಇದ್ದು ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ದೇಶಕ್ಕೋಸ್ಕರ ಸ್ವಾತಂತ್ರ್ಯ ಹೋರಾಟವನ್ನು ಮಾಡಿದರು. ಅವರ ಸ್ವಾವಲಂಬಿ ಜೀವನ ಇಂದಿನ ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು, ನಾವು ಕಷ್ಟಪಟ್ಟು ಓದಬೇಕು. ನಮಗೆ ಯಾರೂ ಒತ್ತಡ ಹಾಕಿ ಓದಿಸಬಾರದು ನಾವು ಸ್ವಾಲಂಬಿಯಾಗಿದ್ದಲ್ಲಿ ನಮ್ಮ ಜೀವನದಲ್ಲಿ ಉನ್ನತ ಸ್ಥಾನವನ್ನು ಪಡೆಯಲು ಸಾಧ್ಯವಿದೆ ಎಂದು ಅವರು ಹೇಳಿದರು.
ಲಾಲ್ ಬಹದ್ದೂರ್ ಶಾಸ್ತ್ರಿಯವರ ಪ್ರಾಮಾಣಿಕತೆಯ ಜೀವನವನ್ನು ವಿದ್ಯಾರ್ಥಿಗಳಿಗೆ ಅರ್ಥಪೂರ್ಣವಾಗಿ ವಿವರಿಸಿದರು. ದೇಶದ ಸೈನಿಕರು ಮತ್ತು ರೈತರಿಗೆ ಸಮಾನವಾದ ಗೌರವವನ್ನು ಶಾಸ್ತ್ರಿಯವರು ನೀಡಿದರು ಎಂಬುದನ್ನು ನೆನಪಿಸಿದರು. ಅವರು ಪ್ರಧಾನಿಯಾಗಿದ್ದ ದೇಶವು ಪ್ರಗತಿಯತ್ತ ಮುನ್ನಡೆಯುವಂತೆ ಅವರು ಮಾಡಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಅಧ್ಯಾಪಕರ ತಂಡವು ಭಜನೆಯನ್ನು ನಡೆಸಿಕೊಟ್ಟಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ. ನಾೖಕ್ ಮಾತನಾಡಿ ಗಾಂಧೀಜಿಯವರ ರಾಮ ರಾಜ್ಯದ ಕನಸು ನನಸಾಗಲು ನಾವೆಲ್ಲ ವಿದ್ಯಾರ್ಥಿಗಳು ಅವರ ಪ್ರಾಮಾಣಿಕತೆಯ ದಾರಿಯಲ್ಲಿ ನಡೆದು ದೇಶದ ಋಣ ತೀರಿಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ದೇಶದ ಅಭಿವೃದ್ಧಿಗೆ ನಾವೆಲ್ಲರೂ ಈ ಮಹಾನೀಯರ ಜಯಂತಿಯ ದಿವಸ ಪಣ ತೊಡಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ ಕೆ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ಪೂರ್ವ ಪ್ರಾಥಮಿಕ ಶಾಲೆ ಸಂಚಾಲಕಿ ನೀಮಾ ಸಕ್ಸೇನಾ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸ್ವಾಗತವನ್ನು ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಟಿ. ರಾಜಾರಾಮ್ ರಾವ್, ವಂದನಾರ್ಪಣೆಯನ್ನು ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ವಿದ್ಯಾ ಜಿ. ಕಾಮತ್, ನಿರೂಪಣೆಯನ್ನು ಅಧ್ಯಾಪಕಿ ದೀಪ್ತಿ ಹಾಗೂ ಪರಿಚಯವನ್ನು ಕನ್ನಡ ಅಧ್ಯಾಪಕರಾದ ಶರಣಪ್ಪ ನೆರವೇರಿಸಿದರು.