ಮಂಗಳೂರು ಡಿ. 24 : ಶಕ್ತಿನಗರದ ಶಕ್ತಿ ಪಪೂ ಕಾಲೇಜಿಗೆ ಬೆಂಗಳೂರಿನಿಂದ ಬೈಕ್ ಮೂಲಕ ಪ್ರಯಾಣ ಬೆಳೆಸಿರುವ ಸಾಫ್ಟ್‌ವೇರ್ ಇಂಜಿನಿಯರ್ ಕು. ಯಶಸ್ವಿನಿ ಜೋಯಿಸ್ ಭೇಟಿ. ಇವರು ಬೆಂಗಳೂರಿನಿಂದ ಮಂಗಳೂರಿನ ಮೂಲಕ ಗೋವಕ್ಕೆ ಬೈಕ್‌ನ ಸಾಹಸ ಯಾತ್ರೆಯನ್ನು ಕೈಗೊಂಡಿರುತ್ತಾರೆ. ಈ ಸಂದರ್ಭದಲ್ಲಿ ಶಕ್ತಿ ಪಪೂ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಸಂವಾದವನ್ನು ನಡೆಸಿಕೊಟ್ಟರು. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಸೂಕ್ತ ವೇದಿಕೆಯಲ್ಲಿ ಅನಾವರಣಗೊಳಿಸಬೇಕೆಂದು ಧೈರ್ಯದ ಮಾತುಗಳನ್ನಾಡಿದರು.
ನಾವು ಸಮಾಜದ ಬಗ್ಗೆ ಕಾಳಜಿವಹಿಸಬೇಕು. ನಾನು ಒಬ್ಬಳು ಹೆಣ್ಣು ಮಗಳಾಗಿ ಬೈಕ್‌ನ ಮೂಲಕ ರಾಜ್ಯದ ಉದ್ದಗಲಕ್ಕೂ ಭೇಟಿ ನೀಡಿ ಯುವ ಜನರಲ್ಲಿರುವ ಮಾನಸಿಕ ಒತ್ತಡವನ್ನು ನಿವಾರಿಸಲು ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡುತ್ತಿದ್ದೇನೆ ಎಂದು ಹೇಳಿದರು. ನಾವು ಕಲಿಕೆಗೆ ಮಹತ್ವ ನೀಡಬೇಕು. ಬೇರೆ ಕೆಟ್ಟ ವಿಚಾರಗಳ ಬಗ್ಗೆ ಯೋಚನೆಯನ್ನು ಮಾಡಬಾರದು. ಧನಾತ್ಮಕ ಚಿಂತನೆಯ ಮೂಲಕ ತಂದೆ ತಾಯಿ ಮತ್ತು ಗುರುಹಿರಿಯರನ್ನು ಗೌರವಿಸಬೇಕೆಂದು ಕರೆ ನೀಡಿದರು. ನಮ್ಮ ಜೀವನದಲ್ಲಿ ಸಾಹಸಮಯ ಪ್ರಯತ್ನಗಳನ್ನು ಮಾಡಬೇಕು. ಆ ಮೂಲಕ ಸಮಾಜದ ಪರಿವರ್ತನೆಯನ್ನು ಮಾಡಲು ಸಾಧ್ಯವೆಂದು ಹೇಳಿದರು. ನಮ್ಮಲ್ಲಿ ಒಳ್ಳೆಯ ವಿಷಯಗಳನ್ನು ಕಲಿಯುವ ಅಭಿರುಚಿ ಇರಬೇಕೆಂದರು.
ನಾವು ಯಾವುದೇ ಸಂದರ್ಭದಲ್ಲಿಯು ಭಯ ಪಡಬಾರದು. ಧೈರ್ಯದಿಂದ ಮುನ್ನುಗಿದಾಗ ಮಾತ್ರ ನಮಗೆ ಸಾಧನೆ ಮಾಡಲು ಸಾಧ್ಯವೆಂದು ಹೇಳಿದರು. ಶಕ್ತಿ ವಿದ್ಯಾ ಸಂಸ್ಥೆಯು ಇಂತಹ ಗುಣವನ್ನು ಖಂಡಿತವಾಗಿಯು ಕಲಿಸಿಕೊಡುತ್ತದೆ ಎಂದು ಅವರು ಹೇಳಿದರು.
ಶಕ್ತಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಉಪನ್ಯಾಸಕಿ ಶ್ರೀಮತಿ ದಿವ್ಯಜ್ಯೋತಿ ಸ್ವಾಗತಿಸಿದರು ಹಾಗೂ ಓಂಪ್ರಕಾಶ್ ವಂದಿಸಿ, ನಿರೂಪಿಸಿದರು.