ಮಂಗಳೂರು ಏ. 18 : ಶಕ್ತಿನಗರದ ಶಕ್ತಿ ಪಪೂ ಕಾಲೇಜಿನಲ್ಲಿ 2023-24 ನೇ ಸಾಲಿನಲ್ಲಿ ವಾಲಿಬಾಲ್ಗೆ ಆಯ್ಕೆ ಪ್ರಕ್ರಿಯೆಯು ನಡೆಯಿತು. ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಶಕ್ತಿ ಎಜ್ಯುಕೇಶನ್ ಟ್ರಸ್ಟ್ನ ಪ್ರಧಾನ ಸಲಹೆಗಾರ ರಮೇಶ್.ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಶಕ್ತಿ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ಕೊಡುತ್ತಿದೆ. ಕಳೆದ ವರ್ಷ ವಾಲಿಬಾಲ್ ಆಯ್ಕೆ ಪ್ರಕ್ರಿಯೆಯನ್ನು ಪ್ರಪ್ರಥಮ ಬಾರಿಗೆ ಆಯೋಜಿಸುವ ಮೂಲಕ ಪ್ರಾರಂಭ ಮಾಡಿತು. ಇದಕ್ಕೋಸ್ಕರ ನಿರಂತರ ತರಬೇತಿಯನ್ನು ನೀಡಲಾಯಿತು. ಇದರ ಫಲಶುತಿಯಾಗಿ ವಿದ್ಯಾಭಾರತಿ ಅಖಿಲ ಭಾರತ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ಬಹುಮಾನವನ್ನು ಪಡೆಯುವುದರ ಮೂಲಕ ದೇಶದ ಗಮನ ಸೆಳೆಯಿತು. ಶಕ್ತಿ ಪಪೂ ಕಾಲೇಜಿನಲ್ಲಿ ವಾಲಿಬಾಲ್ಗೆ ಆಯ್ಕೆಯಾಗಿರುವ ಎಲ್ಲಾ ವಿದ್ಯಾರ್ಥಿಗಳು ಉತ್ತಮ ರೀತಿಯ ಆಟವನ್ನು ಪ್ರದರ್ಶಿಸಿರುವುದು ಮಾತ್ರವಲ್ಲದೆ ಉತ್ತಮವಾದ ಅಂಕವನ್ನು ಪಡೆಯುವುದರ ಮೂಲಕ ತಂದೆ-ತಾಯಿ ಹಾಗೂ ಕಾಲೇಜಿಗೆ ಕೀರ್ತಿಯನ್ನು ತಂದುಕೊಟ್ಟಿರುವುದು ಶ್ಲಾಘನೀಯ ವಿಷಯವಾಗಿದೆ ಎಂದು ಅವರು ಹೇಳಿದರು.
ಆಡಳಿತ ಮಂಡಳಿಯು ಕಲಿಕೆಯ ಜೊತೆ ಆಟೋಟ ಸ್ಪರ್ದೆಗಳಿಗೆ ನಿರಂತರ ಸಹಕಾರವನ್ನು ನೀಡಿ ಉಚಿತ ವಸತಿ, ಊಟ ಮತ್ತು ಪಠ್ಯವನ್ನು ಬೋಧನೆಯನ್ನು ನೀಡುತ್ತಾ ಬರುತ್ತಿದೆ. ಈ ವರ್ಷವು ಈ ರೀತಿಯ ಆಯ್ಕೆ ಪ್ರಕ್ರಿಯೆಯ ಮೂಲಕ ಸುಮಾರು ೧೦ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಇಲ್ಲಿ ತಯಾರಾದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗದ ಮೂಲಕ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟಕ್ಕೆ ಹೋಗಲು ಸಾಧ್ಯವಿದೆ ಎಂದರು.
ಪ್ರಾಸ್ತಾವಿಕವಾಗಿ ಕಾಲೇಜಿನ ಪ್ರಾಂಶುಪಾಲರಾದ ಪ್ರಥ್ವಿರಾಜ್ ಮಾತನಾಡಿ ನಾವು ನಮ್ಮ ಗುರಿಯನ್ನು ಇಟ್ಟುಕೊಂಡು ಸಾಧನೆ ಮಾಡಲು ಇದೊಂದು ವೇದಿಕೆ ಎಂದು ಹೇಳಿದರು. ನಂತರ ಎಲ್ಲರನ್ನು ಈ ಕಾರ್ಯಕ್ರಮಕ್ಕೆ ಅವರು ಸ್ವಾಗತಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಸಂಸ್ಥೆಯ ದೈಹಿಕ ನಿರ್ದೇಶಕರು ಹಾಗೂ ತರಬೇತುದಾರರಾದ ಮನೋಜ ಕುಮಾರ್, ದೈಹಿಕ ನಿರ್ದೇಶಕಿ ಸುರೇಖಾ ಮತ್ತು ದೈಹಿಕ ನಿರ್ದೇಶಕರಾದ ಮನೋಹರ್ ಅವರು ಉಪಸ್ಥಿತರಿದ್ದರು. ಧನ್ಯವಾದವನ್ನು ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲರಾದ ರವಿಶಂಕರ್ ಹೆಗಡೆ ನೆರೆವೆರಿಸಿದರು. ಕನ್ನಡ ಅಧ್ಯಾಪಕರಾದ ಶರಣಪ್ಪ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.