ಮಂಗಳೂರು ಆ. 12 : ಶಕ್ತಿನಗರದ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾಭಾರತಿ ಕರ್ನಾಟಕ ವತಿಯಿಂದ ಆಯೋಜಿಸಲಾಗಿರುವ 2 ದಿನಗಳ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಮಂಗಳೂರು ಲೋಕಸಭಾ ಸದಸ್ಯರಾದ ಶ್ರಿ ನಳಿನ್ ಕುಮಾರ್ ಕಟೀಲ್‌ರವರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಕಬಡ್ಡಿ ಸ್ವದೇಶಿ ಆಟವಾಗಿರುತ್ತದೆ. ಇದನ್ನು ಎಲ್ಲಾ ಸಂಸ್ಥೆಗಳು ಪ್ರೋತ್ಸಾಹಿಸಬೇಕು. ಸಣ್ಣ ವಯಸ್ಸಿನ ಮಕ್ಕಳಿಗೆ ಇಂತಹ ಆಟದ ಬಗ್ಗೆ ಅಭಿರುಚಿಯನ್ನು ರೂಢಿಸಬೇಕು. ಪ್ರತಿಯೊಬ್ಬ ಆಟಗಾರರು ರಾಮ, ಸೀತೆ ಆಗುವಂತೆ ವಿದ್ಯಾಭಾರತಿ ಪ್ರೋತ್ಸಾಹಿಸುವುದನ್ನು ಅವರು ಶ್ಲಾಘಿಸಿದರು. ಕರ್ನಾಟಕದ ಬೀದರ್‌ನಿಂದ ದ.ಕನ್ನಡ ತನಕದ ಅನೇಕ ತಂಡಗಳು ಭಾಗವಹಿಸಿರುವುದನ್ನು ಅಭಿನಂದಿಸಿದರು. ಇಂತಹ ಆಟದಲ್ಲಿ ಎಲ್ಲರೂ ಭಾಗವಹಿಸಿ ವಿವಿಧ ಹಂತಗಳಲ್ಲಿ ವಿಜಯಿಯಾಗುವಂತೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನ ಕಾರ್ಯಾಧ್ಯಕ್ಷರಾದ ಶ್ರೀ ಪುರುಷೋತ್ತಮ ಮಾತನಾಡಿ ಕ್ರೀಡೆಗೆ ಶಿಕ್ಷಣ ಸಂಸ್ಥೆಗಳು ಉತ್ತೇಜನವನ್ನು ನೀಡಬೇಕು. ಆಗ ಅನೇಕ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶಗಳು ಲಭಿಸುತ್ತದೆ. ಇಂತಹ ಕ್ರೀಡಾಪಟುಗಳನ್ನು ಗುರುತಿಸಿ ಸರ್ಕಾರ ಉದ್ಯೋಗವಕಾಶಗಳನ್ನು ಒದಗಿಸಲು ಮುಂದಾಗಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆಯನ್ನು ಶಕ್ತಿ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಡಾ.ಕೆ. ಸಿ. ನಾೖಕ್ ವಹಿಸಿ ಮಾತನಾಡಿ ನಾವು ಸೋಲು ಗೆಲುವುವಿನ ಬಗ್ಗೆ ಯೋಚನೆ ಮಾಡಬಾರದು. ನಾವು ಖುಷಿಯಿಂದ ಆಟವಾಡಬೇಕು. ಸೋಲು ಗೆಲುವು ಎನ್ನುವುದು ಎಲ್ಲಾ ರಂಗದಲ್ಲಿಯು ಸಹಜವಾಗಿ ಇರುತ್ತದೆ. ಅದನ್ನು ನಾವು ಆನಂದಿಸಬೇಕು. ಇಂತಹ ಕಬಡ್ಡಿಯನ್ನು ಆಯೋಜಿಸಲು ಸಹಕರಿಸಿರುವ ವಿದ್ಯಾಭಾರತಿಗೆ ಅಭಿನಂದನೆಯನ್ನು ಸಲ್ಲಿಸಿದರು.
ವಿದ್ಯಾಭಾರತಿ ಕರ್ನಾಟಕದ ಕಾರ್ಯದರ್ಶಿ ವಸಂತ ಮಾಧವ ಪ್ರಸ್ತಾವಿಕವಾಗಿ ಮಾತನಾಡಿ ವಿದ್ಯಾ ಭಾರತಿ ಕೇಂದ್ರ ಸರ್ಕಾರದ SGFI (ಸ್ಕೂಲ್ ಗೇಮ್ಸ್ ಫೇಡರೇಶನ್ ಆಫ್ ಇಂಡಿಯಾದ) ಸಂಯೋಜನೆಯೊಂದಿಗೆ ಅನೇಕ ಕ್ರೀಡಾ ಕೂಟವನ್ನು ಆಯೋಜಿಸುತ್ತಿದೆ. ಇದು ವಿದ್ಯಾರ್ಥಿಗಳಿಗೆ ಲಭಿಸಿದ ಉತ್ತಮ ಅವಕಾಶ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸಂಜಿತ್ ನಾೖಕ್, ವಿದ್ಯಾಭಾರತಿ ಕರ್ನಾಟಕ ಶಾರೀರಕ ಪ್ರಮುಖ್ ದೇವೇಂದ್ರನ್, ಸ್ಥಳೀಯ ಕಾರ್ಪೋರೇಟರ್ ವನಿತ ಪ್ರಸಾದ್, ಶಕ್ತಿ ಪಪೂ ಕಾಲೇಜು ಪ್ರಾಂಶುಪಾಲರಾದ ವೆಂಕಟೇಶ್ ಮೂರ್ತಿ ಉಪಸ್ಥಿತರಿದ್ದರು. ವಿದ್ಯಾಭಾರತಿ ದ.ಕ.ಜಿಲ್ಲಾ ಕಾರ್ಯದರ್ಶಿ ರಮೇಶ್ ಕೆ. ಸ್ವಾಗತಿಸಿ, ಶಕ್ತಿ ರೆಸಿಡೆನ್ಸಿಯಲ್ ಶಾಲೆ ಪ್ರಾಂಶುಪಾಲರಾದ ರವಿಶಂಕರ್ ಹೆಗಡೆ ವಂದಿಸಿ, ನಿರೂಪಣೆಯನ್ನು ಕನ್ನಡ ಉಪನ್ಯಾಸಕ ಸುನೀಲ್ ನೆರವೇರಿಸಿದರು.