ಮಂಗಳೂರು, ಆ. 13 : ಶಕ್ತಿನಗರದ ಶಕ್ತಿ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿರುವ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದ ಸಮಾರೋಪ ಸಮಾರಂಭವು ಇಂದು ನೆರವೇರಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಡಿ. ವೇದವ್ಯಾಸ ಕಾಮತ್ ಆಗಮಿಸಿ ಮಾತನಾಡಿ ಕಬಡ್ಡಿ ಕಠಿಣ ಪರಿಶ್ರಮದ ಜೊತೆ ಬುದ್ಧಿವಂತಿಕೆಯನ್ನು ಉಪಯೋಗಿಸಿ ಆಡುವ ಆಟವಾಗಿದೆ. ಈ ಆಟವನ್ನು ಏಕಾಗ್ರತೆಯಿಂದ ಆಡಿದಾಗ ಮಾತ್ರ ಯಶಸ್ಸು ಲಭಿಸಲು ಸಾಧ್ಯವಿದೆ. ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಧೈರ್ಯ ಮತ್ತು ಸ್ಥೈರ್ಯದ ಆಟವಾಗಿದೆ. ಈಗಿನ ಕಾಲಘಟ್ಟದಲ್ಲಿ ಕಬಡ್ಡಿ ತುಂಬಾ ಮುಂದುವರಿದಿದೆ. ನಾವು ಸಣ್ಣ ವಯಸ್ಸಿನಲ್ಲಿ ಹೆಚ್ಚಿನ ಶ್ರಮ ವಹಿಸಿದರೆ ಮಾತ್ರ ಖಂಡಿತವಾಗಿಯೂ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಆಟಗಾರರಾಗಿ ರೂಪುಗೊಳ್ಳಬಹುದು ಎಂದು ಹೇಳಿದರು. ವಿದ್ಯಾಭಾರತಿ ಕ್ಷೇತ್ರೀಯ ನೈತಿಕ ಆಧ್ಯಾತ್ಮಿಕ ಪ್ರಮುಖರಾದ ವೆಂಕಟರಮಣ ಅವರು ಮಾತನಾಡಿ ಕಬಡ್ಡಿ ಆಟದಲ್ಲಿ ನಾವೆಲ್ಲರೂ ಪ್ರಾಮಾಣಿಕತೆಯನ್ನು ಕಲಿಯಲು ಸಾಧ್ಯವಿದೆ. ಒಗ್ಗಟ್ಟಿನ ಪ್ರದರ್ಶನದ ಮೂಲಕ ನಮ್ಮ ಧೈರ್ಯ ಮತ್ತು ಸಾಹಸವನ್ನು ಪ್ರದರ್ಶಿಸಲು ಇದೊಂದು ವೇದಿಕೆ ಎಂದು ಹೇಳಿದರು.
ವಿದ್ಯಾಭಾರತಿ ಪ್ರಾಂತ ಶಾರೀರಿಕ ಪ್ರಮುಖ ದೇವೇಂದ್ರನ್ ಮಾತನಾಡಿ ವಿದ್ಯಾಭಾರತಿ ಶಿಸ್ತು ಮತ್ತು ಸಂಸ್ಕಾರವನ್ನು ಅನೇಕ ಆಟಗಳಲ್ಲಿ ಪ್ರದರ್ಶನ ಮಾಡುತ್ತದೆ. ಇದರಿಂದಾಗಿ ಶಾಲೆ ಮತ್ತು ಪ.ಪೂ ಕಾಲೇಜು ಹಂತದಲ್ಲಿ ಪ್ರಾಮಾಣಿಕವಾಗಿ ಕಬಡ್ಡಿ ಆಟವಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಕ್ತಿ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಡಾ| ಕೆ.ಸಿ. ನ್ಯಾಕ್ ನಾವು ಎಲ್ಲರೂ ನಮ್ಮ ಶಿಕ್ಷಣದ ಜೊತೆ ಆಟಕ್ಕೂ ಒತ್ತು ನೀಡಬೇಕು. ಆಗ ನಾವು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಬೆಳವಣಿಗೆ ಹೊಂದಲು ಸಾಧ್ಯ ಎಂದರು. ಕ್ರೀಡಾಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ಕ್ರೀಡಾಭಾರತಿ ದ.ಕ ಜಿಲ್ಲಾಧ್ಯಕ್ಷರಾದ ಶ್ರೀ ಕರಿಯಪ್ಪ ರೈ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ವೇದಿಕೆಂಯಲ್ಲಿ ಜಿಲ್ಲಾ ಶಾರೀರಿಕ ಪ್ರಮುಖ ಕರುಣಾಕರ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ವಿದ್ಯಾಭಾರತಿ ದ.ಕ ಜಿಲ್ಲಾ ಕಾರ್ಯದರ್ಶಿ ರಮೇಶ್ ಕೆ ಸ್ವಾಗತವನ್ನೂ, ಕು. ಮೌನ ಪ್ರಾರ್ಥನೆಯನ್ನು, ಶಕ್ತಿ ವಿದ್ಯಾಸಂಸ್ಥೆಯ ಕ್ರೀಡಾವಿಭಾಗದ ಮುಖ್ಯಸ್ಥ ಮನೋಜ ಕುಮಾರ್ ವಂದಿಸಿದರು. ಶಕ್ತಿ ವಸತಿ ಶಾಲೆ ಪ್ರಾಂಶುಪಾಲ ರವಿಶಂಕರ ಹೆಗಡೆ ನಿರೂಪಿಸಿದರು.
14 ವಯೋಮಾನದ ಒಳಗಿನ ಬಾಲಕರ ವಿಭಾಗದಲ್ಲಿ ಪ್ರಥಮ – ದಕ್ಷಿಣಕನ್ನಡ, ದ್ವಿತೀಯ- ಮಂಡ್ಯ,
ಬಾಲಕಿಯರ ವಿಭಾಗ – ಪ್ರಥಮ – ದಕ್ಷಿಣಕನ್ನಡ, ದ್ವಿತೀಯ- ಮಂಡ್ಯ,
17 ವಯೋಮಾನದ ಒಳಗಿನ ಬಾಲಕರ ವಿಭಾಗದಲ್ಲಿ ಪ್ರಥಮ – ಕಲಬುರ್ಗಿ, ದ್ವಿತೀಯ- ಧಾರವಾಡ,
ಬಾಲಕಿಯರ ವಿಭಾಗ- ಪ್ರಥಮ -ದಕ್ಷಿಣಕನ್ನಡ, ದ್ವಿತೀಯ- ಬೆಳಗಾವಿ,
19 ವಯೋಮಾನದ ಒಳಗಿನ ಬಾಲಕರ ವಿಭಾಗದಲ್ಲಿ ಪ್ರಥಮ -ದಕ್ಷಿಣ ಕನ್ನಡ, ದ್ವಿತೀಯ-ಬೆಂಗಳೂರು,
ಬಾಲಕಿಯರ ವಿಭಾಗ- ಪ್ರಥಮ – ದಕ್ಷಿಣಕನ್ನಡ