ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ಅತ್ಯಂತ ಸಂಭ್ರಮ ಸಡರಗದಿಂದ ಗಾಂಧೀಜಿ ಹಾಗೂ ಲಾಲ್ ಬಹುದ್ದೂರದ ಶಾಸ್ತ್ರೀ ಜಯಂತಿಯನ್ನು ಆಚರಿಸಲಾಯಿತು.
ದೀಪ ಬೆಳಗಿಸಿ ಗಾಂಧೀಜಿ ಹಾಗೂ ಶಾಸ್ತ್ರೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶಕ್ತಿ ಪ. ಪೂ. ಕಾಲೇಜಿನ ಪ್ರಾಂಶುಪಾಲ ಶ್ರೀ ವೆಂಕಟೇಶ ಮೂರ್ತಿ ಎಚ್ ಹಾಗೂ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲ ರವಿಶಂಕರ ಹೆಗಡೆ ಉದ್ಘಾಟಿಸಿದರು. ಸರ್ವಧರ್ಮ ಪ್ರಾರ್ಥನೆ ಹಾಗೂ ಧರ್ಮಗ್ರಂಥಗಳ ಪಠಣೆಯನ್ನು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನಿರ್ವಹಿಸಿದರು. ಶಕ್ತಿ ವಸತಿ ಶಾಲೆಯ ಆರನೇ ತರಗತಿಯ ವಿದ್ಯಾರ್ಥಿ ಸಂಕಲ್ಪ ಹೆಗಡೆ ದಿನದ ವಿಶೇಷತೆಯ ಕುರಿತಂತೆ ಕಿರು-ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಕ್ತಿ ವಸತಿಶಾಲೆಯ ಪ್ರಾಂಶುಪಾಲ ರವಿಶಂಕರ ಹೆಗಡೆ ಮಾತನಾಡಿ ’ಗಾಂಧೀಜಿಯವರು ಸತ್ಯ ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದ್ದಾರೆ. ವಿಶೇಷವಾಗಿ ಕರಾವಳಿಯಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದ ಕಾರಣದಿಂದ ಇಂದಿಗೂ ಉಪ್ಪಿಗೆ ಸರಕಾರ ತೆರಿಗೆ ವಿಧಿಸುತ್ತಿಲ್ಲ. ಒಂದು ತುತ್ತನ್ನು ತಿನ್ನುವಾಗಲೂ ಈ ಕಾರಣದಿಂದ ಗಾಂಧೀಜಿಯನ್ನು ನಿತ್ಯವೂ ನೆನೆಯಬೇಕು ಎಂದರು. ಲಾಲ್ ಬಹುದ್ದೂರ್ ಶಾಸ್ತ್ರೀಯವರು ಭಾರತ ಕಂಡ ಶ್ರೇಷ್ಠ ಪ್ರಧಾನಿಗಳು, ಯುದ್ಧ ಸ್ಥಾನವನ್ನು ತಲುಪಿ ಸೈನಿಕರನ್ನು ಪ್ರೋತ್ಸಾಹಿಸಿದ ಪ್ರಥಮ ಪ್ರಧಾನಿಗಳಾಗಿದ್ದರು. ಅವರ ತ್ಯಾಗ ಹಾಗೂ ಕಾರ್ಯನಿಷ್ಠೆಗಳು ಸದಾ ಅನುಕರಣೀಯ ಎಂದರು.
ಕಾರ್ಯಕ್ರಮದ ನಂತರ ಮಕ್ಕಳು ಪ್ರಧಾನಿಯವರ ಕರೆಯಂತೆ ಇಂದು ಶಾಲೆಯ ಮುಖ್ಯ ರಸ್ತೆಯಲ್ಲಿ ಸ್ವಚ್ಛತೆಯನ್ನು ಮಾಡುವ ಮೂಲಕ ಅರಿವು ಮೂಡಿಸಿದರು. ಕನ್ನಡ ಶಿಕ್ಷಕ ಶರಣಪ್ಪ ನಿರೂಪಿಸಿದರು. ವೇದಿಕೆಯಲ್ಲಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಶ್ರೀ ವೆಂಕಟೇಶ ಮೂರ್ತಿ ಉಪಸ್ಥಿತರಿದ್ದರು.