ಶಕ್ತಿನಗರದ ಶಕ್ತಿ ಎಜ್ಯುಕೇಶನ್ ಟ್ರಸ್ಟ್ನ ಆಡಳಿತಕ್ಕೊಳಪಟ್ಟ ಶಕ್ತಿ ವಸತಿ ಶಾಲೆ ಮತ್ತು ಶಕ್ತಿ ಪದವಿ ಪೂರ್ವ ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳಿಗೆ ಶಕ್ತಿ ಸನಾತನ ಸಂಪದ ಉಪನ್ಯಾಸ ಸರಣಿಯ ಉದ್ಘಾಟನಾ ಸಮಾರಂಭವು ದಿನಾಂಕ 30-11-2023 ರಂದು ಸಂಜೆ 4 ಗಂಟೆಗೆ ಸರಿಯಾಗಿ ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ನೆರವೇರಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರಿನ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಆಗಮಿಸಲಿದ್ದಾರೆ. ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ವಜ್ರದೇಹಿ ಸಂಸ್ಥಾನ ಇವರು ವಹಿಸಲಿದ್ದಾರೆ.
ಶಕ್ತಿ ವಿದ್ಯಾ ಸಂಸ್ಥೆಯು ಕಳೆದ 6 ವರ್ಷಗಳಿಂದ ಭಾರತೀಯ ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಮಕ್ಕಳಲ್ಲಿ ಜಾಗೃತಗೊಳಿಸಲು ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ರಾಷ್ಟ್ರೀಯ ಶಿಕ್ಷಾ ಸಂಸ್ಥಾನದ ವಿದ್ಯಾ ಭಾರತೀಯ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ನಮ್ಮ ನೆಲದ ಭಾಷೆ, ಕಲೆ, ಸಾಹಿತ್ಯ, ಇತಿಹಾಸ, ಶಿಲ್ಪಕಲೆ, ವಿಜ್ಞಾನ, ಗಣಿತ ಮೊದಲಾದ ಅಂಶಗಳನ್ನು ತಿಳಿಸಿಕೊಡುವ ಉದ್ದೇಶದಿಂದ ಅನೇಕ ಮಹನಿಯರ ಮಾರ್ಗದರ್ಶನದ ರಸನಿಮಿಷಗಳನ್ನು ನಿರ್ಮಿಸಿಕೊಡುತ್ತಿದೆ.
ಭಾರತೀಯ ಮೌಲ್ಯಗಳು ಹಾಗೂ ಚಿಂತನೆಗಳನ್ನು ಮಕ್ಕಳಲ್ಲಿ ಬಿತ್ತಲು ಒಂದು ಹೊಸ ಕಾರ್ಯಕ್ರಮವನ್ನು ಶಕ್ತಿ ವಿದ್ಯಾ ಸಂಸ್ಥೆ ಕೈಗೆತ್ತಿಕೊಳ್ಳುತ್ತಿದೆ. ಆ ಕಾರ್ಯಕ್ರಮವೇ ಶಕ್ತಿ – ಸನಾತನ ಸಂಪದ. ಸನಾತನ ಎಂಬುದಕ್ಕೆ ಹಳೆಯ, ಪುರಾತನ ಹಾಗೂ ನಾಶವಿಲ್ಲದ್ದು ಎಂಬ ಅರ್ಥವಿದೆ. ಸಂಪದ ಎಂದರೆ ಉತ್ತಮವಾದ ಹೆಜ್ಜೆ ಎಂದು ಅರ್ಥ. ಸನಾತನ ಚಿಂತನೆಯ ಕಡೆಗೆ ಉಧಾತ್ತವಾದ ಹೆಜ್ಜೆಯನ್ನು ಶಕ್ತಿ ವಿದ್ಯಾ ಸಂಸ್ಥೆ ಈಗ ಇಡಲು ಮುಂದಾಗಿದೆ.
ಪ್ರತಿ ತಿಂಗಳ ಶನಿವಾರ ಮಧ್ಯಾಹ್ನ ನಂತರ 2 ಉಪನ್ಯಾಸಗಳು ನಾಡಿನ ವಿವಿಧ ಪಂಡಿತರಿಂದ ಆಯೋಜನೆಗೊಳ್ಳಲಿದೆ. ರಾಮಾಯಣ, ಮಹಾಭಾರತ, ಪುರಾಣಗಳು, ವೇದ, ಜ್ಯೋತಿಷ್ಯ, ಭಾರತೀಯ ವಿಜ್ಞಾನ, ಭಾರತೀಯ ಗಣಿತ, ಸಾಹಿತ್ಯ, ಶಿಲ್ಪಕಲೆ, ಇತಿಹಾಸ, ಖಗೋಳಶಾಸ್ತ್ರ, ಯೋಗ, ಆಯುರ್ವೇದ ಹೀಗೆ ಹತ್ತು ಹಲವಾರು ಭಾರತೀಯ ಜ್ಞಾನ ಪರಂಪರೆಯ ಕವಲುಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದೇ ಈ ಕಾರ್ಯಕ್ರಮದ ಉದ್ದೇಶ.
ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ ವಸುಧೈವ ಕುಟುಂಬಕಂ ಮೊದಲಾದ ಉದಾತ್ತ ಭಾವಗಳು ಮಕ್ಕಳಲ್ಲಿ ಬೆಳೆಯಲಿ. ತನ್ಮೂಲಕ ಅವರು ಭಾರತದ ಅತ್ಯುತ್ತಮ ಪ್ರಜೆಗಳಾಗಲೀ ಎಂಬುದೇ ಸಂಸ್ಥೆಯ ಆಶಯ.