ಮಂಗಳೂರಿನ ಶಕ್ತಿನಗರದ ಶಕ್ತಿ ವಿದ್ಯಾಸಂಸ್ಥೆಯಲ್ಲಿ ಕ್ರೀಡಾಭಾರತಿ ಮಂಗಳೂರು ವಿಭಾಗದ ಸಹಯೋಗದೊಂದಿಗೆ ರಥಸಪ್ತಮಿ ಸೂರ್ಯನಮಸ್ಕಾರ ಕಾರ್ಯಕ್ರಮವನ್ನು ಆಚರಿಸಲಾಯಿತು.
ದೀಪಪ್ರಜ್ವಲನೆಯ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಸಹಕಾರ್ಯವಾಹ ಶ್ರೀ ಹರಿಕೃಷ್ಣ ನೆರವೇರಿಸಿದರು. ನಂತರ ಮಾತನಾಡಿದ ಅವರು ರಥಸಪ್ತಮಿ ಅತ್ಯಂತ ವಿಶಿಷ್ಟವಾದ ಕಾರ್ಯಕ್ರಮ. ಈ ದಿನದಿಂದ ಸೂರ್ಯನ ಕಿರಣದ ಪ್ರಖರತೆ ಹೆಚ್ಚಾಗುತ್ತದೆ. ಸೂರ್ಯನ ಈ ಕಿರಣದ ಪ್ರಖರತೆ ನಮ್ಮ ನಿತ್ಯ ಜೀವನದ ಎಲ್ಲ ಕಾರ್ಯಕ್ಕೆ ಪ್ರೇರಣೆ ನೀಡಬೇಕು. ನಿತ್ಯಕರ್ಮಗಳಾಗಿ ನಾವು ಪ್ರತಿನಿತ್ಯ ಭಜನೆ ಹಾಗೂ ಯೋಗವನ್ನು ಬಿಡದೆ ಮಾಡಬೇಕು ಮತ್ತು ಪ್ರತಿನಿತ್ಯ ಸೂರ್ಯನಮಸ್ಕಾರವನ್ನು ಮಾಡಬೇಕು. ನೀರು, ವಿದ್ಯುತ್‌ಗಳನ್ನು ಮಿತವಾಗಿ ಬಳಸಲು ಇಂದೇ ಪ್ರಮಾಣ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಕ್ತಿ ವಿದ್ಯಾಸಂಸ್ಥೆಯ ಪ್ರಧಾನ ಸಲಹೆಗಾರ ಶ್ರೀ ರಮೇಶ್ ಕೆ ಮಾತನಾಡಿ ಯೋಗಕ್ಕೆ ಸಂಬಂಧಪಟ್ಟ ಯೋಗ ದಿನಾಚರಣೆ ಮತ್ತು ರಥಸಪ್ತಮಿಯ ಕಾರ್ಯಕ್ರಮಗಳನ್ನು ಕ್ರೀಡಾಭಾರತಿ ಪ್ರತಿ ವರ್ಷವೂ ಆಯೋಜಿಸಿಕೊಂಡು ಬರುತ್ತಿದೆ. ಅವರ ಸಹಕಾರಕ್ಕೆ ಸಂಸ್ಥೆಯ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದರು. ಎಲ್ಲರೂ ನಿರಂತರವಾಗಿ ಯೋಗ ಅಭ್ಯಾಸವನ್ನು ಮಾಡಬೇಕು ಎಂದರು.
ಕ್ರೀಡಾಭಾರತಿ ಮಂಗಳೂರು ವಿಭಾಗದ ಅಧ್ಯಕ್ಷರಾದ ಶ್ರೀ ಕರಿಯಪ್ಪ ರೈ ಪ್ರಾಸ್ತಾವಿಕವಾಗಿ ಮಾತನಾಡಿ ಶಕ್ತಿ ವಿದ್ಯಾಸಂಸ್ಥೆಯ ಸಹಕಾರದೊಂದಿಗೆ ಹಲವು ವರ್ಷಗಳಿಂದ ಕ್ರೀಡಾಭಾರತಿ ರಥಸಪ್ತಮಿ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದೆ. ಈ ಸಹಕಾರಕ್ಕೆ ನಾವು ಅಭಿನಂದೆನೆಯನ್ನು ಸಲ್ಲಿಸುತ್ತೇವೆ. ಮಾನವನಿಗೆ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಅತ್ಯಂತ ಮುಖ್ಯ. ಮಾನಸಿಕವಾದ ಮತ್ತು ಶಾರೀರಿಕ ಆರೋಗ್ಯದ ವಿಷಯಕ್ಕೆ ಭಾರತ ಅತ್ಯಂತ ವಿಶೇಷವಾದ ಕೊಡುಗೆಯನ್ನು ಜಗತ್ತಿಗೆ ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀ ವೆಂಕಟೇಶಮೂರ್ತಿ ಎಚ್, ಶಕ್ತಿ ವಸತಿ ಶಾಲೆ ಪ್ರಾಂಶುಪಾಲ ರವಿಶಂಕರ ಹೆಗಡೆ, ದೇಲಂಪಾಡಿ ಯೋಗ ಪ್ರತಿಷ್ಠಾನದ ಪದಾಧಿಕಾರಿಗಳಾದ ವೀಣಾ ಹಾಗೂ ಸುಭದ್ರಾ ಅವರು ಉಪಸ್ಥಿತರಿದ್ದರು. ಕ್ರೀಡಾಭಾರತಿ ಕಾರ್ಯದರ್ಶಿಗಳಾದ ಶ್ರೀ ಎ. ಕೃಷ್ಣ ಶೆಟ್ಟಿ ತಾರೆಮಾರ್ ವಂದಿಸಿದರು. ಕನ್ನಡ ಶಿಕ್ಷಕ ಶರಣಪ್ಪ ನಿರೂಪಿಸಿದರು. ಕಾರ್ಯಕ್ರಮದ ನಂತರ ದೇಲಂಪಾಡಿ ಯೋಗ ಪ್ರತಿಷ್ಠಾನದ ಪದಾಧಿಕಾರಿಗಳಾದ ವೀಣಾ ಮತ್ತು ಸುಭದ್ರಾ ಇವರಿಂದ ವಿದ್ಯಾರ್ಥಿಗಳ ಜೊತೆ ಸೂರ್ಯನಮಸ್ಕಾರವನ್ನು ನಡೆಸಿಕೊಟ್ಟರು.