ಮಂಗಳೂರು : ಶಕ್ತಿ ವಿದ್ಯಾಸಂಸ್ಥೆ ಮತ್ತು ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲೆ ಇದರ ಸಹಯೋಗದೊಂದಿಗೆ ಆಗಸ್ಟ್ ೮ ಗುರುವಾರದಂದು ಶಕ್ತಿನಗರದ ಶಕ್ತಿ ಶಿಕ್ಷಣ ಸಂಸ್ಥೆ ಆವರಣದಲ್ಲಿರುವ ಸರೋಶ್ ಸ್ಮಾರಕ ಈಜುಕೊಳದಲ್ಲಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆ ನಡೆಯಿತು. ಶ್ರೀ ಗೋಪಾಲಕೃಷ್ಣ ದೇವಸ್ಥಾನ ಹಾಗೂ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ತೀರ್ಥವನ್ನು ಈಜುಕೊಳಕ್ಕೆ ಪ್ರೋಕ್ಷಿಸುವ ಮೂಲಕ ಸ್ಪರ್ಧೆಯನ್ನು ಉದ್ಘಾಟಿಸಿದ ಕಂಕನಾಡಿ ಆರಕ್ಷಕ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಶಿವಕುಮಾರ್ ಇವರು ಆರೋಗ್ಯವಂತ ದೇಹದ ಜೊತೆಗೆ ಆರೋಗ್ಯವಂತ ಮನಸ್ಸು ಕೂಡ ಬಹಳ ಮುಖ್ಯ. ಆರೋಗ್ಯ ದೃಢವಾಗಿದ್ದಾಗ ಮನಸ್ಸೂ ಸ್ವಸ್ಥವಾಗಿರುತ್ತದೆ. ಕ್ರೀಡೆಯ ಮೂಲಕ ಆರೋಗ್ಯವಂತ ದೇಹವನ್ನು ಕಾಪಿಡಲು ಸಾಧ್ಯವಿದೆ ಎಂದು ಹೇಳಿದರು.
ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷರಾದ ಲೋಕಯ್ಯ ಡಿ. ಮಾತಾನಾಡಿ ಆರೋಗ್ಯವಂತ ವಿದ್ಯಾರ್ಥಿಗಳಿಂದ ದೇಶದ ಪ್ರಗತಿ ಸಾಧ್ಯ. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ವ್ಯಕ್ತಿತ್ವವನ್ನು ಬೆಳೆಸಬೇಕು. ಆ ಮೂಲಕ ದೇಶಸೇವೆಗೆ ಮನಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಕ್ತಿ ಎಜ್ಯುಕೇಶನ್ ಟ್ರಸ್ಟ್ನ ಆಡಳಿತಾಧಿಕಾರಿಯಾದ ಡಾ. ಕೆ. ಸಿ. ನಾೖಕ್ ಅವರು ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶಮೂರ್ತಿ ಎಚ್. ಉಪಸ್ಥಿತರಿದ್ದರು. ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಬಬಿತ ಸೂರಜ್ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಸುನಿಲ್ ಪಲ್ಲಮಜಲು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಬಳಿಕ ವಿದ್ಯಾಭಾರತಿ ವ್ಯಾಪ್ತಿಯೊಳಗಿನ ವಿವಿಧ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಈಜು ಸ್ಪರ್ಧೆ ನಡೆಯಿತು.