ಮಂಗಳೂರು : ಶಕ್ತಿನಗರದ ಶಕ್ತಿ ವಸತಿ ಶಾಲೆಯ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಶಕ್ತಿ ಕುಟುಂಬ ಮಿಲನ-2025 ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.
ಸಂಸ್ಥೆಯ ಎಲ್ಲ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳ ಕುಟುಂಬವು ಭಾಗಿಯಾಗಿದ್ದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ ಜನರಲ್ ಮ್ಯಾನೇಜರ್ ಕೆ.ಐ.ಓ.ಸಿ.ಎಲ್ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಕುಟುಂಬ ಪ್ರಭೋದನ್ ಪ್ರಮುಖರಾದ ಶ್ರೀ ಗಜಾನನ ಪೈ ದೀಪವನ್ನು ಬೆಳಗಿಸಿ ನಂತರ ನೆರೆದಿದ್ದ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಇವರು ಭಾರತ ವಿಶ್ವಕ್ಕೆ ಕೊಟ್ಟ ಅತಿ ಅಮೂಲ್ಯ ವಿಚಾರವೆಂದರೆ ವಸುದೈವ ಕುಟುಂಬಕಂ. ಆದರೆ ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯರ ಸಂಗತಿಗಳೇ ಸರ್ವಶ್ರೇಷ್ಠ ಎಂದು ತಿಳಿದು ಅದರ ಅಂಧಾನುಕರಣೆ ಮಾಡಲಾಗುತ್ತಿದೆ. ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿ ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿವೆ. ಕುಟುಂಬದಲ್ಲಿ ಹೊಂದಾಣಿಕೆ, ನಂಬಿಕೆ, ಪರಸ್ಪರ ಸಹಕಾರ, ಗೌರವಗಳೇ ಇಲ್ಲದಂತಹ ವಾತಾವರಣ ಸೃಷ್ಟಿಯಾಗಿದೆ.
ಸಂಬಂಧ, ಸಹಬಾಳ್ವೆ ಸಂವಾದ, ಸಂಸ್ಕೃತಿ, ಸಂತತಿ, ಸಂಸ್ಕಾರ, ಸತ್ಕಾರದಂತಹ ಸಪ್ತ ಸೂತ್ರಗಳನ್ನು ನಾವು ಕುಟುಂಬದಲ್ಲಿ ಅಳವಡಿಸಿಕೊಂಡಾಗ ಸಾರ್ಥಕ ಸುಖ ಸಂಸಾರವನ್ನು ಮಾಡಲು ಸಾಧ್ಯವಾಗುತ್ತದೆ. ಜೀವನದಲ್ಲಿ ನಾನು ನನ್ನದು ಎಂಬುದನ್ನು ತ್ಯಜಿಸಿ ತ್ಯಾಗದ ಭಾವನೆಯನ್ನು ಬೆಳೆಸಿಕೊಂಡಾಗ ಕುಟುಂಬದ ವ್ಯವಸ್ಥೆ ಗಟ್ಟಿಯಾಗುತ್ತದೆ. ಕುಟುಂಬ ವ್ಯವಸ್ಥೆಯ ಮೌಲ್ಯಗಳನ್ನು ಶಾಲೆಗಳಲ್ಲಿ ಮಕ್ಕಳಿಗೆ ಕಲಿಸಬೇಕು. ಈ ಮಕ್ಕಳೇ ನಮ್ಮ ಭವಿಷ್ಯದ ಜನಾಂಗ ಆಗಿರುವುದರಿಂದ ಸಣ್ಣ ಸಣ್ಣ ಪ್ರಯತ್ನಗಳ ಮೂಲಕ ಮಕ್ಕಳಿಗೆ ಕುಟುಂಬದಲ್ಲಿ ಸಂಬಂಧಗಳ ಮೌಲ್ಯವನ್ನು ತಿಳಿಸಬೇಕು. ಕುಟುಂಬೋ ರಕ್ಷತಿ ರಕ್ಷಿತ: ಎಂಬ ಧ್ಯೇಯ ವಾಕ್ಯದೊಂದಿಗೆ ಎಲ್ಲರಿಗೂ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪ್ರಧಾನ ಸಲಹೆಗಾರ ರಮೇಶ್ ಕೆ. ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ನಂತರ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಆಡಳಿತಾಧಿಕಾರಿಗಳು ಮಾತನಾಡಿ ಇದೊಂದು ಅದ್ಬುತವಾದ ಬಹಳ ಅರ್ಥಪೂರ್ಣ ಕಾರ್ಯಕ್ರಮ. ನಮ್ಮ ಶಕ್ತಿ ವಿದ್ಯಾ ಸಂಸ್ಥೆಯೇ ಒಂದು ಕುಟುಂಬ. ಇಲ್ಲಿ ಕರ್ತವ್ಯ ನಿಭಾಯಿಸುತ್ತಿರುವ ಪ್ರತಿಯೋರ್ವರು ಈ ಕುಟುಂಬದ ಸದಸ್ಯರು. ಎಲ್ಲರೂ ಒಟ್ಟಾಗಿ ಕಾರ್‍ಯ ನಿರ್ವಹಿಸಿದರೆ ಸಂಸ್ಥೆ ಎತ್ತರೆತ್ತರಕ್ಕೇರುತ್ತದೆ. ಪ್ರತಿವರ್ಷವೂ ಕೂಡಾ ಈ ಕುಟುಂಬ ಮಿಲನ ಕಾರ್‍ಯಕ್ರಮವು ಈ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ನಡೆಯುತ್ತದೆ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಒಂದು ಭಾಗವಹಿಸುವಂತಾಗಲಿ ಎಂದು ತಿಳಿಸಿದರು.
ವಿವಿಧ ಮನರಂಜನೆಯ ಆಟಗಳಲ್ಲಿ ಶಿಕ್ಷಕ ಶಿಕ್ಷಕೇತರ ಕುಟುಂಬಸ್ಥರು ಬಹಳ ಉತ್ಸಾಹದಿಂದ ಭಾಗವಹಿಸಿದರು .ಶಾಲಾ ಶಿಕ್ಷಕರಿಂದ ಹಾಡು, ನೃತ್ಯವನ್ನೊಳಗೊಂಡು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
202-24 ನೇ ಸಾಲಿನಲ್ಲಿ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಎಲ್ಲ ಕಾರ್ಯಕ್ರಮಗಳು ಮತ್ತು ಕ್ರೀಡಾ ವಿಭಾಗದಲ್ಲಿ ಶಕ್ತಿ ಶಾಲಾ ಮಕ್ಕಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ತೋರಿದ ಸಾಧನೆಯ ಕುರಿತಾದ ವಿಡಿಯೋವನ್ನು ಪ್ರದರ್ಶಿಸಲಾಯಿತು ನಂತರ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಶಕ್ತಿ ವಿದ್ಯಾ ಸಂಸ್ಥೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶ್ರೀಮತಿ ಸುಮತಿ ಪೈ, ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ್ ಮೂರ್ತಿ, ಶಕ್ತಿ ವಸತಿ ಶಾಲಾ ಪ್ರಾಂಶುಪಾಲೆ ಬಬಿತಾ ಸೂರಜ್, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶಿಕ್ಷಕಿ ಭವ್ಯಶ್ರೀ ಸ್ವಾಗತಿಸಿದರು. ಶಿಕ್ಷಕ ಶರಣಪ್ಪ ನಿರೂಪಿಸಿ, ವಂದಿಸಿದರು.