ಮಂಗಳೂರು : ನಗರದ ಬಿಕರ್ನಕಟ್ಟೆಯ ಕ್ಲಾಸಿಕ್ ಪ್ರೈಡ್ ಕಟ್ಟಡದಲ್ಲಿ ಶಕ್ತಿ ಕೋಚಿಂಗ್ ಅಕಾಡೆಮಿ ಸೋಮವಾರ ಶುಭಾರಂಭಗೊಂಡಿತು. ಮಂಗಳೂರಿನ ಶಾರದಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್ ಅಕಾಡೆಮಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಪ್ರೊ. ಪುರಾಣಿಕ್, ಪ್ರತಿ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಭಗವಂತನ ಅನುಗ್ರಹ ದೊರೆಯುತ್ತದೆ ಎಂಬುದಕ್ಕೆ ಶಕ್ತಿ ಶಿಕ್ಷಣ ಟ್ರಸ್ಟ್ ಪ್ರವರ್ತಕರಾದ ಕೆ.ಸಿ. ನಾೖಕ್ ಅವರು ಸಾಕ್ಷಿಯಾಗಿದ್ದಾರೆ. ಸಾಹಸ ಪ್ರವೃತ್ತಿಯ ಅವರು ಸಾರಿಗೆ ಉದ್ಯಮ, ಬಿಲ್ಡರ್, ಗೋಪಾಲಕೃಷ್ಣ ದೇವಸ್ಥಾನ ನಿರ್ಮಾಣ ಮೂಲಕ ಅಧ್ಯಾತ್ಮ ಕ್ಷೇತ್ರದಲ್ಲಿ ಯಶಸ್ಸು ಗಳಿಸಿದ ಬಳಿಕ ಇದೀಗ ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟು ಹೆಸರು ಗಳಿಸಿದ್ದಾರೆ. ಪೂರ್ವಸಿದ್ಧತೆ ಮತ್ತು ಯೋಜನಾ ಬದ್ದವಾಗಿ ಕಾರ್ಯನಿರ್ವಹಣೆ ಮೂಲಕ ಪ್ರತಿ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಇದೀಗ ಶಕ್ತಿ ಕೋಚಿಂಗ್ ಅಕಾಡೆಮಿ ಮೂಲಕವೂ ಯಶಸ್ಸು ಮುಂದುವರೆಯಲಿ ಎಂದು ಹಾರೈಸಿದರು.
ಡ್ರಗ್ಸ್ನಿಂದ ಮಂಗಳೂರು ಹಾಳಾಗಿದೆ. ಮಾದಕ ದ್ರವ್ಯ ಹಾವಳಿಯಿಂದ ಮಂಗಳೂರಿಗೆ ವಿದ್ಯಾರ್ಥಿಗಳನ್ನು ಕಳುಹಿಸಲು ಹೊರಗಿನವರು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಈ ಪರಿಸ್ಥಿತಿ ಬದಲಾಗಬೇಕು. ಶಿಕ್ಷಣದಲ್ಲಿ ಆಧುನಿಕತೆ ಜತೆಗೆ ಮೌಲಿಕ ವಿಚಾರಗಳಿಗೂ ಆದ್ಯತೆ ಸಿಗಬೇಕು. ಶಕ್ತಿ ಕೋಚಿಂಗ್ ಅಕಾಡೆಮಿಯಲ್ಲಿ ಈ ಎರಡೂ ವಿಚಾರಗಳಿಗೆ ಆದ್ಯತೆ ದೊರೆಯಲಿ. ಸಾಮಾನ್ಯ ಜನರು, ಆರ್ಥಿಕವಾಗಿ ಹಿಂದುಳಿದವರಿಗೂ ಕೋಚಿಂಗ್ ಸೌಲಭ್ಯ ಸಿಗಲಿ. ದಕ್ಷಿಣ ಕನ್ನಡ ಜಿಲ್ಲೆ ಶಿಕ್ಷಣದ ಹಬ್ ಎಂದು ಗುರುತಿಸಿಕೊಂಡರೂ, ಐಎಎಸ್, ಐಪಿಎಸ್ ಸಹಿತ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವಲ್ಲಿ ಇಲ್ಲಿನ ವಿದ್ಯಾರ್ಥಿಗಳು ಹಿಂದುಳಿದಿದ್ದಾರೆ. ನೂತನ ಕೋಚಿಂಗ್ ಅಕಾಡೆಮಿಯಿಂದ ಈ ಕೊರತೆ ನೀಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತ ನಿರ್ದೇಶಕ ಕೆ.ಸಿ. ನಾೖಕ್ ಮಾತನಾಡಿ, ದೇವರ ಪ್ರೇರಣೆಯಿಂದ ಶಕ್ತಿನಗರದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ನಿರ್ಮಿಸಿದಂತೆ, ಇದೀಗ ಶಿಕ್ಷಣ ಕ್ಷೇತ್ರಕ್ಕೆ ಕಾಲಿರಿಸಿದ್ದೇನೆ. ಈ ಹಿಂದೆ ಎಲ್ಲರೂ ಸಹಕಾರ ನೀಡಿದಂತೆ ಶಕ್ತಿ ಕೋಚಿಂಗ್ ಅಕಾಡೆಮಿಗೂ ಸಹಕಾರ ದೊರೆಯುವ ಭರವಸೆಯಿದೆ. ವಿದ್ಯಾರ್ಥಿ ಮತ್ತು ಪೋಷಕರ ನಿರೀಕ್ಷೆಗೂ ಮೀರಿ ಅಕಾಡೆಮಿ ಕಾರ್ಯನಿರ್ವಹಿಸಲಿದೆ. ವಾಣಿಜ್ಯ ದೃಷ್ಟಿಯಿಂದ ಈ ಸಂಸ್ಥೆ ಕಾರ್ಯನಿರ್ವಹಿಸುವುದಿಲ್ಲ. ಆದರೆ, ನಷ್ಟ ಭರಿಸುವ ಶಕ್ತಿ ನಮ್ಮಲ್ಲಿಲ್ಲ. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕಾನೂನಿಗೆ ಅನುಗುಣವಾಗಿ ಸಂಸ್ಥೆ ಕಾರ್ಯಾಚರಿಸಲಿದೆ ಎಂದರು.
ಮನಪಾ ಸದಸ್ಯೆ ಸಬಿತಾ ಮಿಸ್ಕಿತ್ ಅಕಾಡೆಮಿಯ ಮಾಹಿತಿ ಪತ್ರ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಅತಿಥಿಯಾಗಿದ್ದ ದ.ಕ. ಪದವಿಪೂರ್ವ ಕಾಲೇಜು ಪ್ರಾಚಾರ್ಯರ ಸಂಘದ ಅಧ್ಯಕ್ಷ ಕೆ.ಕೆ. ಉಪಾಧ್ಯಾಯ ಶುಭಾಸಂಶನೆ ಮಾಡಿದರು. ಸಗುಣಾ ಕೆ.ಸಿ. ನಾೖಕ್ ಉಪಸ್ಥಿತರಿದ್ದರು. ಮೇಯರ್ ಭಾಸ್ಕರ್ ಕೆ. ಕಾರ್ಯಕ್ರಮದ ಬಳಿಕ ಆಗಮಿಸಿ ಶುಭ ಹಾರೈಸಿದರು.
ಅಕಾಡೆಮಿ ಸಂಚಾಲಕ ಸಂಜೀತ್ ನಾೖಕ್ ಸ್ವಾಗತಿಸಿದರು. ಶಕ್ತಿ ಶಿಕ್ಷಣ ಟ್ರಸ್ಟ್ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್ ಅತಿಥಿ ಪರಿಚಯ ಮಾಡಿದರು. ಅಕಾಡೆಮಿ ಕೋ ಆರ್ಡಿನೇಟರ್ಗಳಾದ ಸುಧೀರ್ ಎಂ.ಎಸ್., ಡಾ. ದರ್ಶನ್ರಾಜ್, ಶಕ್ತಿ ಪಪೂ ಕಾಲೇಜು ಪ್ರಾಂಶುಪಾಲ ಪ್ರಭಾಕರ ಜಿ.ಎಸ್. ಉಪಸ್ಥಿತರಿದ್ದರು.