ಮಂಗಳೂರು ಸೆ. 5: ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ ಕೆ. ಮತ್ತು ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ರವಿಶಂಕರ್ ಹೆಗಡೆ ಮತ್ತು ದೀಪಕ್ ಕುಡುವ ಅವರು ದೀಪವನ್ನು ಬೆಳಗಿಸಿ ಸಂಭ್ರಮಾಚರಣೆಗೆ ಚಾಲನೆ ನೀಡಿದರು. ಈ ಸಂಭ್ರಮಾಚರಣೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ಪಾದ ಪೂಜೆಯನ್ನು ಮಾಡಿ ಸಂಸ್ಕೃತಿ ಸಂಪ್ರದಾಯದಂತೆ ಬರಮಾಡಿಕೊಂಡರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ರವಿಶಂಕರ್ ಹೆಗಡೆ ಅವರು ಮಾತನಾಡಿ ಪ್ರತಿ ವರ್ಷ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ದಿನ ಗುರುಗಳಿಗೆ ವಂದಿಸುವ ಸುದಿನ. ರಾಧಾಕೃಷ್ಣನ್ ಅವರು ನಮ್ಮ ದೇಶ ಕಂಡ ಅದ್ಭುತ ರಾಷ್ಟ್ರಪತಿಯಾಗಿದ್ದವರು ಅದಕ್ಕೂ ಮಿಗಿಲಾಗಿ ಓರ್ವ ಶಿಕ್ಷಕರಾಗಿ ನಮಗೆಲ್ಲ ಮಾರ್ಗದರ್ಶಕರಾಗಿದ್ದಾರೆ. ನಾವೆಲ್ಲ ಅವರ ತತ್ವದರ್ಶಗಳನ್ನು ಪಾಲಿಸುತ್ತ ಜೀವನದಲ್ಲಿ ಎತ್ತರದ ಸಾಧನೆಯನ್ನು ಮಾಡೋಣ. ಈ ಶಿಕ್ಷಕರ ದಿನಾಚರಣೆಯು ಕೇವಲ ಒಂದು ದಿನಕ್ಕೆ ಸೀಮಿತವಾಗದೆ ವರ್ಷ ಪೂರ್ತಿ ಆಚರಣೆಯಲ್ಲಿದ್ದರೆ ಬಹಳ ಚೆನ್ನಾಗಿರುತ್ತದೆ. ಅಕ್ಷರವನ್ನು ಕಲಿಸಿದಾತ ಗುರು ಅಂತಹ ಗುರುಗಳಿಗೆ ಯಾವತ್ತೂ ಋಣಿಯಾಗಿರಬೇಕು. ಜೀವನದಲ್ಲಿ ಗುರುವು ನಿರ್ಣಯಿಸುವ ಪ್ರತಿ ವಿಷಯವು ವಿದ್ಯಾರ್ಥಿಗಳಿಗೆ ಒಳ್ಳೆಯದಾಗಿರುತ್ತೆ. ಹಾಗಾಗಿ ಗುರುವು ಹೇಳಿದ ಪ್ರತಿ ವಿಷಯವನ್ನು ಅನುಮಾನಿಸದೆ, ಅವಮಾನಿಸದೆ, ಅಸಡ್ಡೆ ತೋರದೆ ಪಾಲಿಸಿದರೆ ಅದೇ ನಿಜವಾದ ಶಿಕ್ಷಕರ ದಿನಾಚರಣೆ. ಜಗತ್ತಿನಲ್ಲಿ ಸಾಧನೆ ಮಾಡಿದ ಎಲ್ಲ ಎಂಜಿನಿಯರ್ಸ್ ಆಗಲಿ, ಡಾಕ್ಟರ್ ಆಗಲಿ ಎಲ್ಲರನ್ನು ನಿರ್ಮಿಸುವವರು ಶಿಕ್ಷಕರು ಹಾಗಾಗಿ ಅಂತಹ ಉತ್ತಮ ಕಾಯಕವನ್ನು ನಾವು ಮಾಡುತ್ತ ಇದ್ದೇವೆ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಮಕ್ಕಳಿಗೆಲ್ಲ ಶುಭ ಹಾರೈಸಿದರು.
ತದನಂತರದಲ್ಲಿ ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ವಿವಿಧ ಮನರಂಜನೆಯ ಆಟಗಳನ್ನು ಆಯೋಜಿಸಿದ್ದರು ಮತ್ತು ವಿಜೇತ ಶಿಕ್ಷಕರಿಗೆ ಬಹುಮಾನಗಳನ್ನು ವಿತರಿಸಿದರು. ವಿದ್ಯಾರ್ಥಿಗಳಿಂದ ಶಿಕ್ಷಕರಿಗಾಗಿ ಹಾಡು, ನೃತ್ಯವನ್ನೊಳಗೊಂಡ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಸಂಭ್ರಮಾಚರಣೆಯಲ್ಲಿ ವಿದ್ಯಾರ್ಥಿ ಅಭಯ್ ದಿನದ ಪ್ರಾಮುಖ್ಯತೆಯನ್ನು ವಾಚಿಸಿದನು. ಅನನ್ಯ ಮತ್ತು ನಿಖಿತ್ ಕಾರ್ಯಕ್ರಮವನ್ನು ನಿರೂಪಿಸಿದರು. ನೈದಿಲೆ ಮತ್ತು ಸಾತ್ವಿರ್ ಆಟೋಟಗಳನ್ನು ಆಯೋಜಿಸಿ ಧನ್ಯವಾದಗಳನ್ನು ಸಲ್ಲಿಸಿದರು. ಅಧ್ಯಾಪಕರಿಗೆ ಸಿಹಿ ತಿನಿಸುಗಳನ್ನು ಹಂಚುವುದರ ಮೂಲಕ ಶಿಕ್ಷಕರ ದಿನಾಚರಣೆಯನ್ನು ಆಚರಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು-ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.