ಮಂಗಳೂರು: ಶಕ್ತಿ ನಗರದ ಶಕ್ತಿ ವಿದ್ಯಾಸಂಸ್ಥೆಯ ವಸತಿನಿಲಯದಲ್ಲಿರುವ ವಿದ್ಯಾರ್ಥಿಗಳು ಶಕ್ತಿ ಶ್ರೀ ಗಣೇಶೋತ್ಸವ ಸೇವಾ ಸಮಿತಿಯ ವತಿಯಿಂದ ಅದ್ದೂರಿಯಾದ ಶ್ರೀ ಗಣೇಶೋತ್ಸವವನ್ನು ಆಚರಿಸಿದರು. ಗೌರಿ ಗಣೇಶದ ದಿನ ಶ್ರೀ ಗೋಪಾಲಕೃಷ್ಣ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಮೆರವಣಿಗೆಯ ಮೂಲಕ ಗಣೇಶನ ಮೂರ್ತಿಯನ್ನು ಶಕ್ತಿ ವಿದ್ಯಾಸಂಸ್ಥೆಗೆ ತರಲಾಯಿತು. ಗಣೇಶ ಚತುರ್ಥಿಯ ದಿನ ವೆಂಕಟ್ರಮಣ ಭಟ್ ಇವರ ನೇತೃತ್ವದಲ್ಲಿ ಪ್ರತಿಷ್ಠಾಪನ ಪೂಜೆಯನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಆಯೋಜಿಸಿದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ. ಮಾತನಾಡಿ ನಮ್ಮ ದೇಶದ ಸ್ವಾತಂತ್ರ್ಯ ಆಂದೋಲನಕ್ಕೆ ಪ್ರೇರಣೆ ಕೊಟ್ಟಿರುವುದು ಗಣೇಶೋತ್ಸವ. ನಮ್ಮ ದೇಶದ ಜನ ಒಗ್ಗೂಡುವುದರಲ್ಲಿ ಮಹತ್ತರವಾದ ಪಾತ್ರವನ್ನು ಗಣೇಶೋತ್ಸವದ ಮೂಲಕ ಅಂದು ಮಾಡಲಾಯಿತು. ಇವತ್ತು ನಾವು ನಮ್ಮ ವಿದ್ಯಾ ಸಂಸ್ಥೆಯಲ್ಲಿ ಈ ಒಂದು ಗಣೇಶೋತ್ಸವದ ಮೂಲಕ ನಾವೆಲ್ಲರೂ ಒಂದುಗೂಡಿ ಈ ಕಾರ್ಯಕ್ರಮವನ್ನು ಆಚರಿಸುತ್ತಿದ್ದೇವೆ. ಇದು ನಮ್ಮಲ್ಲಿರುವ ಒಗ್ಗಟಿನ ಶಕ್ತಿಯನ್ನು ಪ್ರದರ್ಶಿಸುತ್ತದೆ. ನಾವು ನಮ್ಮ ಜೀವನದಲ್ಲಿ ಸಾಮಾಜಿಕವಾಗಿ ಅನೇಕ ಒಳ್ಳೆಯ ಕಾರ್ಯವನ್ನು ಮಾಡಬೇಕು. ಅಂತಹ ಶಕ್ತಿಯನ್ನು ಶ್ರೀ ಮಹಾಗಣಪತಿ ನಮ್ಮಗೆಲ್ಲ ಕರುಣಿಸಲೆಂದು ಅವರು ಶುಭವನ್ನು ಹಾರೈಸಿದರು. ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ ಮೂರ್ತಿ ಮತ್ತು ಶಕ್ತಿ ರೆಸಿಡೆನ್ಸಿಯಲ್ ಶಾಲೆ ಪ್ರಾಂಶುಪಾಲೆ ಬಬಿತಾ ಸೂರಜ್ ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಸಂಜೆ ವಿಸರ್ಜನಾ ಪೂಜೆಯು ಸಂಸ್ಥೆಯ ಸಂಸ್ಥಾಪಕರಾದ ಡಾ.ಕೆ.ಸಿ. ನಾೖಕ್ ಮತ್ತು ಟ್ರಸ್ಟಿ ಸಗುಣ ಸಿ. ನಾೖಕ್ ಅವರ ನೇತೃತ್ವದಲ್ಲಿ ನಡೆಯಿತು. ಅವರು ದೇವರಿಗೆ ವಿಶೇಷವಾದ ಪ್ರಾರ್ಥನೆಯನ್ನು ಸಲ್ಲಿಸಿದರು. ವಿಸರ್ಜನಾ ಪೂಜೆಯ ನಂತರ ಗಣೇಶನ ಮೂರ್ತಿಯ ಭವ್ಯ ಶೋಭಾಯಾತ್ರೆಯು ಶಕ್ತಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶಕ್ತಿ ವಿದ್ಯಾ ಸಂಸ್ಥೆಯ ಬಾವಿಯಲ್ಲಿ ಮೂರ್ತಿಯ ವಿಸರ್ಜನಾ ಕಾರ್ಯಕ್ರಮ ನಡೆಯಿತು. ಶೋಭಾಯಾತ್ರೆಯಲ್ಲಿ ಮಕ್ಕಳಿಂದ ಚೆಂಡೆ ವಾದನ, ಕುಣಿತ ಭಜನೆ, ವೀರಗಾಸೆ ಮತ್ತು ತಾಸೆಯ ಪ್ರದರ್ಶನವು ನಡೆಯಿತು. ವಿದ್ಯಾರ್ಥಿಗಳ ಶಿಸ್ತು ಬದ್ದ ಶೋಭಾಯಾತ್ರೆಯು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.