ಶಿಕ್ಷಕರು ದೇಶ ಕಟ್ಟುವ, ಸೃಜನಶೀಲ ಸಮಾಜವನ್ನು ನಿರ್ಮಿಸುವ, ಮಾನವೀಯ ಮೌಲ್ಯಗಳಿಗೆ ಮನ್ನಣೆ ನೀಡುವ ಶಿಷ್ಯರನ್ನು ರಾಷ್ಟ್ರಕ್ಕೆ ಅರ್ಪಿಸುವ ಕೆಲಸ ಸದಾ ಮಾಡುತ್ತಿರಬೇಕು. ಕತ್ತಲಿನಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ ದಾರಿ ತೋರಿಸುವವನೇ ನೈಜ ಗುರು ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು. ಅವರು ಶಿಕ್ಷಕರ ದಿನದಂದು ಶಕ್ತಿನಗರದ ಶಕ್ತಿ ವಸತಿ ಶಾಲೆ ಹಾಗೂ ಶಕ್ತಿ ಪ.ಪೂ ಕಾಲೇಜಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಇನ್ನೋರ್ವ ಅತಿಥಿ ಮಾಜಿ ಶಾಸಕ ಶ್ರೀ ಜೆ.ಆರ್ ಲೋಬೊ ಮಾತನಾಡುತ್ತಾ ಶಿಕ್ಷಕರು ತಮ್ಮ ತ್ಯಾಗ ಮತ್ತು ಸಮರ್ಪಣಾ ಮನೋಭಾವದಿಂದಲೇ ತಮ್ಮ ಶಿಷ್ಯರ ಮನಃ ಪಟಲದಲ್ಲಿ ಸದಾ ನಿಲ್ಲುತ್ತಾರೆ, ಜಗತ್ತಿನ ಶ್ರೇಷ್ಠ ವ್ಯಕ್ತಿಗಳ ನಿರ್ಮಾಣ ಉತ್ತಮ ಶಿಕ್ಷಕರಿಂದಲೇ ಸಾಧ್ಯವಾಯಿತು ಎಂದು ಅವರು ತನ್ನ ಅನಿಸಿಕೆ ವ್ಯಕ್ತ ಪಡಿಸಿದರು. ಜಿಲ್ಲಾ ಪದವಿ ಪೂರ್ವ ವಿದ್ಯಾಂಗ ಉಪನಿರ್ದೇಶಕ ಶ್ರೀ ನಾಗರಾಜಪ್ಪ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಶ್ರೀ ಗೋಪಾಲಕೃಷ್ಣ ದೇವಸ್ಥಾನ ಆಡಳಿತ ಮೊಕ್ತೇಸರ ಕೆ.ಸಿ ನಾಕ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಕ್ತಿ ಎಜ್ಯುಕೇಶನ್ ಟ್ರಸ್ಟ್ನ ಕಾರ್ಯದರ್ಶಿ ಶ್ರೀ ಸಂಜಿತ್ ನಾಕ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ದೀರ್ಘ ಸೇವೆ ಸಲ್ಲಿಸಿ ತಮ್ಮ ಇಳಿ ಪ್ರಾಯದಲ್ಲೂ ವಿವಧ ಕ್ಷೇತ್ರಗಳಲ್ಲಿ ನಿಸ್ಪೃಹ ಸೇವೆ ಸಲ್ಲಿಸುತ್ತಿರುವ ನಿವೃತ್ತ ಶಿಕ್ಷಕರಾಗಿರುವ ಬಿ. ಶ್ರೀನಿವಾಸ ರಾವ್, ಸಾವಿತ್ರಿ ಶ್ರೀನಿವಾಸ ರಾವ್, ಕೆ.ಎ ರೋಹಿಣಿ, ಬೈಲೂರು ನಾರಾಯಣ ತಂತ್ರಿ, ಬಿ. ಶಂಭು ಶೆಟ್ಟಿ ಹಾಗೂ ಬಿ.ನಾರಾಯಣ ನಾಯಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾಲೇಜಿನ ಪ್ರಾಚಾರ್ಯ ಪ್ರಭಾಕರ ಜಿ.ಎಸ್. ಅತಿಥಿಗಳನ್ನು ಸ್ವಾಗತಿಸಿದರು. ಡಾ. ಮುರಳೀಧರ ನಾಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್ ಅಭಿನಂದನ ಭಾಷಣ ಮಾಡಿದರು. ಶಕ್ತಿ ವಸತಿ ಶಾಲೆಯ ಪ್ರಾಚಾರ್ಯರಾದ ಶ್ರೀಮತಿ ಮಧುಲಿಕಾ ರಾವ್, ಶಿಕ್ಷಕಿ ಶ್ರೀಮತಿ ಪ್ರಿಯಾಂಕ, ವಿದ್ಯಾರ್ಥಿಯಾದ ಅನಿಲ್ ಶಿಕ್ಷಕರ ದಿನದ ಮಹತ್ವದ ಕುರಿತು ಮಾತನಾಡಿದರು. ವಿದ್ಯಾರ್ಥಿಗಳಾದ ಪ್ರತೀಕ್ ಮತ್ತು ಪ್ರಿಯಾ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ನಸೀಮ್ ಬಾನು, ಪ್ರಧಾನ ಸಲಹೆಗಾರ ಶ್ರೀ ರಮೇಶ್ ಕೆ. ಆಡಳಿತ ಸಮಿತಿಯ ಶ್ರೀಮತಿ ಸಗುಣ ಸಿ. ನಾಯ್ಕ್ ಹಾಗೂ ಶ್ರೀಮತಿ ಅಂಜು ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಯಾದ ತುಷಾರ್ ವಂದಿಸಿದರು.
ನಿವೃತ್ತ ಸಾಧಕ ಶಿಕ್ಷಕರ ಪರಿಚಯ
ಶ್ರೀಮತಿ ಕೆ.ಎ. ರೋಹಿಣಿ
ಇವರು 1963 ರಿಂದ 2001 ರ ತನಕ ಪೊಂಪೈ ಪ್ರೌಢಶಾಲೆ ಉರ್ವಾ ಈ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ. ನಿವೃತ್ತಿಯ ನಂತರ ಸಾಮಾಜಿಕವಾಗಿ ತನ್ನನು ತಾನು ತೊಡಗಿಸಿಕೊಂಡಿರುತ್ತಾರೆ. ಇವರು ಮಹಿಳಾ ಸಬಲೀಕರಣದ ಕುರಿತಂತೆ ಬಡ ಮದ್ಯಮ ವರ್ಗದ ಮಹಿಳೆಯರ ಮಧ್ಯೆ ಇವತ್ತಿಗೂ ತನ್ನ ಕಾರ್ಯವನ್ನು ಮಾಡುತ್ತಿದ್ದಾರೆ. ಕನ್ನಡ ಸಾಹಿತ್ಯ ವಲಯದಲ್ಲಿಯೂ ತನ್ನ ಬರವಣಿಗೆಯ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು ನಿಸ್ವಾರ್ಥವಾಗಿ ಮಾಡುತ್ತಿದ್ದಾರೆ.
ಶ್ರೀ ಬಿ. ಶ್ರೀನಿವಾಸ ರಾವ್
ಇವರು 1953 ರಿಂದ 1992 ರ ತನಕ ಅಶೋಕ ನಗರ ಹಿ.ಪ್ರಾ ಶಾಲೆ ಪದವೀಧರ ಮುಖ್ಯೋಪಾಧ್ಯಾಯರಾಗಿ ಈ ಶಾಲೆಯಲ್ಲಿ ಲೆಕ್ಕ ಹಾಗೂ ವಿಜ್ಞಾನ ವಿಷಯದ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ. ಇವರು ನಿವೃತ್ತಿಯ ನಂತರವೂ ಸಾಮಾಜಿಕವಾಗಿ ತನ್ನನು ತಾನು ತೊಡಗಿಸಿಕೊಂಡಿರುವುದರಿಂದ ಎಲ್ಲರಿಗೂ ಮಾದರಿ ಶಿಕ್ಷಕರಾಗಿ ಗುರುತಿಸಿಕೊಂಡಿದ್ದಾರೆ. ಇವರು ಉತ್ತಮ ಶಿಕ್ಷಕರಾಗಿ ಸೇವೆ ಸಲ್ಲಿಸಿರುವುದನ್ನು ಗಮನಿಸಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ. ಇವರು ಈಗ ೮೬ ವರ್ಷದ ಪ್ರಾಯದಲ್ಲಿಯು ಕಲೆ iತ್ತು ಸಾಹಿತ್ಯ ಕ್ಷೇತ್ರದಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಮುಂದೆ ತರುವ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ
ಶ್ರೀಮತಿ ಸಾವಿತ್ರಿ ಎಸ್. ರಾವ್
ಇವರು 1963 ರಿಂದ 1990 ರ ತನಕ ಅಶೋಕನಗರ ಹಿ. ಪ್ರಾ ಶಾಲೆ ಸಹಾಯಕ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ ಶಾಲೆಯಲ್ಲಿ ಎಲ್ಲಾ ವಿಷಯದ ಭೋಧನೆ ಮಾಡಿ ನಿವೃತ್ತರಾಗಿರುತ್ತಾರೆ. ನಿವೃತ್ತಿಯ ನಂತರ ಸಾಮಾಜಿಕವಾಗಿ ತನ್ನನ್ನು ತಾನು ಬೇರೆ ಬೇರೆ ರಂಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಅದ್ಯಾಪಕರು ತರಗತಿಗಳಲ್ಲಿ ಯಾವ ರೀತಿ ಪಾಠ ಪ್ರವಚನವನ್ನು ಮಾಡಬೇಕೆಂಬ ಬಗ್ಗೆ ನೂರಾರು ಕಮ್ಮಟಗಳನ್ನು ಆಯೋಜಿಸಿ ತರಬೇತಿಯನ್ನು ನೀಡುವುದರ ಮೂಲಕ ಉತ್ತಮ ಶಿಕ್ಷಕರ ನಿರ್ಮಾಣದ ಕಾರ್ಯವನ್ನು ಮಾಡಿರುತ್ತಾರೆ. ಈ ಮೂಲಕ ಸಾವಿರಾರು ಶಿಕ್ಷಕರ ಬೋದsನೆಯಲ್ಲಿ ಪ್ರಗತಿ ಕಾಣಲು ಕಾರಣೀಭೂತರಾಗಿದ್ದಾರೆ. ಇವರ ಈ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಹಾಗೂ ಭಾರತ ಸರ್ಕಾರ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ.
ಶ್ರೀ ಬೈಲೂರು ನಾರಾಯಣ ತಂತ್ರಿ
ಇವರು 1976 ರಿಂದ 2010 ರ ತನಕ ಕೆನರಾ ಪ್ರೌಢಶಾಲೆ ಉರ್ವಾ ಈ ಶಾಲೆಯಲ್ಲಿ ಸಂಸ್ಕೃತ ವಿಷಯದ ಶಿಕ್ಷಕ / ಪಂಡಿತರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ. ನಿವೃತ್ತಿಯ ನಂತರ ಶ್ರೀಯುತರು ಸುಲಭವಾಗಿ ಸಂಸ್ಕೃತವನ್ನು ಕಲಿಯುವುದು ಸೇರಿದಂತೆ ಪಾಠ ಪ್ರವಚನದ ವಿಧಾನದ ಬಗ್ಗೆ ತನ್ನ ಅಭಿಪ್ರಾಯ, ಮಾರ್ಗದರ್ಶನ ಹಾಗೂ ತರಬೇತಿ ನೀಡಿರುತ್ತಾರೆ. ಇವರು ಸಂಸ್ಕೃತದಲ್ಲಿ ವ್ಯಾಕರಣ ಹಾಗೂ ಅನೇಕ ಪುಸ್ತಕಗಳನ್ನು ಪ್ರಕಟಿಸಿರುತ್ತಾರೆ. ಇವರ ಸೇವೆಯನ್ನು ಪರಿಗಣಿಸಿ ಕಂಚಿ ಕಾಮಕೋಟಿ ಪ್ರಶಸ್ತಿ, ಶಿಕ್ಷಕ ರತ್ನ ಪ್ರಶಸ್ತಿ ಶೇಣಿ ಕಲೋತ್ಸವ ಪ್ರಶಸ್ತಿ, ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿರುತ್ತಾರೆ. ಇವರು ಅನೇಕ ಶಿಕ್ಷಕರಿಗೆ ಮಾದರಿ ಶಿಕ್ಷಕರಾಗಿ ಜೀವನವನ್ನು ನಡೆಸಿರುತ್ತಾರೆ.
ಶ್ರೀ ಕೆ. ನಾರಾಯಣ ನಾಯಕ್
ಇವರು 1963 – 2001 ರ ತನಕ ಕನ್ನಡ ಹಾಗೂ ಹಿಂದಿ ಶಿಕ್ಷಕರಾಗಿ ಸಜಿಪ ಮೂಡ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಹಾಗೂ ವಿಷಯ ತಪಾಸಣಾಧಿಕಾರಿ ಸಾರ್ವಜನಿಕ ಶಿಕ್ಷಣ ಇಲಾಖೆ ಬಂಟ್ವಾಳ ಇಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ. ಇವರು ತಮ್ಮ ಸೇವಾ ನಿವೃತ್ತಿಯ ನಂತರ ನಿರಂತರವಾಗಿ ಸಾಮಾಜಿಕವಾಗಿ ನಿಸ್ವಾರ್ಥ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶಿಕ್ಷಣ ವೇತನದ ಬಗ್ಗೆ ಜಿಲ್ಲೆಯಾದ್ಯಂತ ತಮ್ಮ ಸ್ವಂತ ಖರ್ಚಿನಿಂದ ಸಂಚರಿಸಿ ಬೀಡಿ ಶಿಕ್ಷಣ ವೇತನ, ಗೇರುಬೀಜ ನಿಗಮದ ಶಿಕ್ಷಣ ವೇತನ, ಕಾರ್ಮಿಕ ಶಿಕ್ಷಣ ವೇತನ ಹಾಗೂ ಸೇರಿದಂತೆ ಸರ್ಕಾರ ಸರ್ಕಾರೇತರ ಸಂಸ್ಥೆಗಳಿಂದ ಲಭಿಸುವ ಶಿಕ್ಷಣ ವೇತನದ ಬಗ್ಗೆ ಸಮಗ್ರವಾದ ಮಾಹಿತಿಯನ್ನು ನೀಡಿ ಅವರಿಗೆ ಶಿಕ್ಷ ವೇತನ ಲಭಿಸಲು ಕಾರಣಿಭೂತರಾಗಿದ್ದಾರೆ. ಇವರು ಕಳೆದ ವರ್ಷ ರೂ 1 ಕೋಟಿಗೂ ಅಧಿಕ ಸ್ಕಾಲರ್ ಶಿಪನ್ನು ಕೊಡಿಸುವಲ್ಲಿ ಶ್ರಮ ವಹಿಸಿರುತ್ತಾರೆ. ಇದೇ ತರ ವೃದ್ದಾಪ್ಯ ವೇತನ, ವಿಧವಾ ವೇತನ, ವಿಶೇಷ ಚೇತನರ ಶಿಕ್ಷಣ ವೇತನವನ್ನು ಕೊಡಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿರುತ್ತಾರೆ.
ಶ್ರೀ ಬಿ ಶಂಭು ಶೆಟ್ಟಿ
ಇವರು 1958 ರಿಂದ 1998 ರ ತನಕ ವಿವಿಧ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿ ಸಂತ ಅಲೋಶಿಯಸ್ ಪ್ರೌಢಶಾಲೆಯಲ್ಲಿ ಕನ್ನಡ ಹಾಗೂ ಸಮಾಜ ವಿಜ್ಞಾನ ಅದ್ಯಾಪಕರಾಗಿ ಸೇವೆ ಸಲ್ಲಿಸಿರುತ್ತಾರೆ. ಇವರು ನೂರಾರು ನಾಟಕಗಳನ್ನು ನಿರ್ದೇಶನ ಮಾಡಿ ಪ್ರದರ್ಶಿಸಿರುತ್ತಾರೆ. ಇವರು ರಂಗಭೂಮಿಯಲ್ಲಿ ಸಾವಿರಾರು ರಂಗಾಭಿಮಾನಿಗಳಿಗೆ ಪ್ರೋತ್ಸಾಹಕರಾಗಿ ಕಾರ್ಯನಿರ್ವಹಿಸಿರುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಇವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿರುತ್ತದೆ.