ಮಂಗಳೂರು : ಶಕ್ತಿನಗರದ ಶಕ್ತಿ ವಸತಿಯುತ ಶಾಲೆ, ಶಕ್ತಿ ಪ.ಪೂ. ಕಾಲೇಜು ಮತ್ತು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವತಿಯಿಂದ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರ ನೇತೃತ್ವದಲ್ಲಿ ಹತ್ತು ದಿವಸಗಳಿಂದ ನಡೆಯುತ್ತಿದ್ದ ಯೋಗ ಶಿಬಿರದ ಸಮಾರೋಪ ಸಮಾರಂಭವು ಇಂದು ಸಂಜೆ ದೇವಸ್ಥಾನದ ಸಭಾಂಗಣದಲ್ಲಿ ನೆರವೇರಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ದ.ಕ. ಜಿಲ್ಲಾ ಹೋಟೆಲ್ ಮಾಲಕರ ಸಂಘದ ಅಧ್ಯಕ್ಷರಾದ ಕುಡ್ಪಿ ಜಗದೀಶ ಶೆಣೈ ಅವರು ಮಾತನಾಡಿ ಯೋಗ, ಪ್ರಾಣಾಯಾಮ, ಮುದ್ರೆಗಳ ಮೂಲಕ ತಾನು ಗಂಭೀರ ಅನಾರೋಗ್ಯವನ್ನು ಸ್ವತಃ ಪರಿಹರಿಸಿಕೊಂಡಿದ್ದೇನೆ ಎಂದು ಹೇಳಿದರು. ಶರೀರಕ್ಕೆ ಬರುವ ಅನೇಕ ಕಾಯಿಲೆಗಳಿಗೆ ಯೋಗವೊಂದೆ ಪರಿಹಾರ. ಯೋಗದಿಂದ ದೀರ್ಘಾಯುಷ್ಯ ಪಡೆಯಲು ಸಾಧ್ಯ ಎಂದು ತಿಳಿಸಿದರು.
ಶಕ್ತಿ ಶಾಲೆಯ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್ ಮಾತನಾಡಿ ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಭಾರತದ ಮೌಲ್ಯ ಕಡಿಮೆಯಾಗಿತ್ತು. ಅಂತಹ ಸಂಸ್ಕೃತಿಯು ಯೋಗದಿಂದ ಮರು ಸ್ಥಾಪಿಸಲ್ಫಟ್ಟಿದೆ. ಇಂದು ಜಗತ್ತು ಯೋಗವನ್ನು ಒಪ್ಪಿಕೊಂಡು ತಮ್ಮ ಶಾಲೆಗಳಲ್ಲಿ ಪಠ್ಯದಲ್ಲಿ ಅಳವಡಿಸಿಕೊಳ್ಳುತ್ತವೆ ಎಂದು ಹೇಳಿದರು.
ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರು ಮಾತನಾಡಿ ’ ರೋಗ ಮುಕ್ತ ಸಮಾಜದ ನಿರ್ಮಾಣ ಯೋಗದಿಂದ ಸಾಧ್ಯ. ಇಂತಹ ಯೋಗವನ್ನು ದಿನ ನಿತ್ಯ ತಮ್ಮ ಜೀವನದಲ್ಲಿ ಅಳವಡಿಸಲು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ.ಸಿ.ನಾಕ್ ಮಾತನಾಡಿ ಸಮಾಜದಲ್ಲಿ ಯೋಗದ ಮೂಲಕ ಜಾಗ್ರತರಾಗಬೇಕು. ಮಾನಸಿಕ ಹಾಗೂ ಶಾರೀರಿಕ ನೆಮ್ಮದಿಗೆ ಯೋಗ ಬಹಳ ಮುಖ್ಯ ಎಂದರು.
ಅಶ್ವಿತಾ ಎ.ಆರ್., ಸುನಿಲ್ ಅಂಗರಾಜೆ, ಶ್ರೀಮತಿ ಆಶಾ, ಡಾ. ಈಶ್ವರ ಭಟ್ಟ್, ಮೋಹನ್ ಬಂಗೇರ ಹಾಗೂ ಜಯರಾಮ ತಮ್ಮ ಅನುಭವವನ್ನು ಹಂಚಿಕೊಂಡರು. ಒಟ್ಟು 75 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಇವರಿಗೆಲ್ಲಾ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಯೋಗ ಗುರುಗಳು ಶಿಬಿರಾರ್ಥಿಗಳಿಂದ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ವೇದಿಕೆಯಲ್ಲಿ ಶಕ್ತಿ ಎಜುಕೇಶನ್ ಟ್ರಸ್ಟಿನ ಪ್ರಧಾನ ಸಲಹೆಗಾರ ರಮೇಶ್ ಕೆ. ಉಪಸ್ಥಿತರಿದ್ದರು. ದೇವಸ್ಥಾನದ ಆಡಳಿತಾಧಿಕಾರಿ ಕೃಷ್ಣ ಕುಮಾರ್ ಸ್ವಾಗತಿಸಿದರು. ಶಕ್ತಿ ಪ. ಪೂ. ಕಾಲೇಜಿನ ಪ್ರಾಂಶುಪಾಲರಾದ ಪ್ರಭಾಕರ್ ಜಿ. ಎಸ್. ವಂದಿಸಿದರು.